ಹಾಸನ: 50 ಲಕ್ಷ ರೂಪಾಯಿ ವಿಮೆ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಅಪಘಾತದಲ್ಲಿ ಗಾಯಗೊಂಡಿದ್ದೇನೆಂದು ಸುಳ್ಳು ಮೆಡಿಕೋ ಲೀಗಲ್ ಕೇಸ್ (MLC) ವರದಿ ಸೃಷ್ಟಿಸಿದ ಆರೋಪದ ಮೇರೆಗೆ ಹಾಸನ ನಗರದ ಜನಪ್ರಿಯ ಆಸ್ಪತ್ರೆ (Janapriya Hospital) ವಿರುದ್ಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ. ಅಬ್ದುಲ್ ಬಶೀರ್, ವೈದ್ಯ ಡಾ. ಮೊಹೀಷ್ ಅಹ್ಮದ್ ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ಸೇರಿದಂತೆ ಆರು ಮಂದಿ ಆರೋಪಿಗಳಾಗಿ ಪ್ರಕರಣದಲ್ಲಿ ಹೆಸರು ಪಡೆದಿದ್ದಾರೆ. ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಮ್ಯಾನೇಜರ್ ನಿಖಿಲ್ ಅವರ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆಯ ಕಲಂಗಳು 193, 196, 200, 463, 465, 468 ಮತ್ತು 471ರಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟಿದ್ದು, ಆರೋಪಿಗಳ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ನಡೆಸಿದ ಆರೋಪ ಹೊರಿಸಲಾಗಿದೆ.
ಪ್ರಕರಣದ ಹಿನ್ನೆಲೆ
2019ರಲ್ಲಿ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಂದಿಹೊಸಹಳ್ಳಿ ಗ್ರಾಮದ ರಘು (A2) ಎನ್ನುವ ವ್ಯಕ್ತಿ, ಅಪಘಾತದಲ್ಲಿ ಗಾಯಗೊಂಡಿದ್ದೇನೆಂದು ಹೇಳಿ 50 ಲಕ್ಷ ರೂಪಾಯಿ ವಿಮೆ ಪರಿಹಾರಕ್ಕಾಗಿ ಹಾಸನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದನು. ತನಿಖೆಯ ವೇಳೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ನೇಮಕಾತಿ ಪಡೆದ ಖಾಸಗಿ ತನಿಖಾ ಸಂಸ್ಥೆ ‘ಲೆಜಿಟ್ ಇನ್ವೆಸ್ಟಿಗೇಶನ್ ಸರ್ವಿಸಸ್’ ನಿಂದ ಈ ಪ್ರಕರಣದ ನಿಜಾಂಶ ಬಯಲಾಗಿತು.
ಹಾಸನ ಸರ್ಕಾರಿ ಆಸ್ಪತ್ರೆಯ ದಾಖಲೆಗಳ ಪ್ರಕಾರ ರಘು ಮರದ ಮೇಲಿಂದ ಬಿದ್ದು ಗಾಯಗೊಂಡಿದ್ದು, ಎಂಎಲ್ಸಿ ದಾಖಲೆ ಸಹ ಅಲ್ಲಿ ಸೃಷ್ಟಿಯಾಗಿತ್ತು. ಆದರೆ ಅದೇ ಗಾಯದ ಕುರಿತಂತೆ ಜನಪ್ರಿಯ ಆಸ್ಪತ್ರೆಯಲ್ಲಿ ಸುಳ್ಳು MLC ವರದಿ ಸೃಷ್ಟಿಸಿ, ರಘು ಅಪಘಾತದಿಂದ ಗಾಯಗೊಂಡಿದ್ದಾನೆಂದು ತೋರಿಸಲಾಗಿತ್ತು. ಈ ಆಧಾರದ ಮೇಲೆ ವಿಮೆ ಕಂಪನಿಯಿಂದ ಪರಿಹಾರ ಪಡೆಯಲು ಪ್ರಯತ್ನಿಸಲಾಯಿತು.

ತನಿಖಾ ವರದಿ ಮತ್ತು ದಾಖಲೆಗಳ ಆಧಾರದ ಮೇಲೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಆರೋಪಿಗಳು:
1. ಶಂಕರಪ್ಪ – ಬಾಣಾವರದ ಮಾಸ್ತಿಹಳ್ಳಿ
2. ರಘು – ನಂದಿಹೊಸಹಳ್ಳಿ, ತರೀಕೆರೆ ತಾಲ್ಲೂಕು
3. ಶಬ್ಬೀರ್ – ಅರಸೀಕೆರೆ
4. ನಯಾಜ್ ಪಾಷಾ – ಅಶೋಕ್ ಲೈಲ್ಯಾಂಡ್ ವಾಹನದ ಮಾಲೀಕ
5. ಡಾ. ಮೊಹೀಷ್ ಅಹ್ಮದ್ – ಜನಪ್ರಿಯ ಆಸ್ಪತ್ರೆ ವೈದ್ಯ
6. ಆಡಳಿತಾಧಿಕಾರಿ – ಜನಪ್ರಿಯ ಆಸ್ಪತ್ರೆ
ಹಾಸನದ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಆನಂದ್ ಅವರು 2014ರ ಮತ್ತೊಂದು ಪ್ರಕರಣದ ವಿಚಾರಣೆಯಲ್ಲೂ ಇದೇ ಆಸ್ಪತ್ರೆಯ ವಿರುದ್ಧ ಸುಳ್ಳು ದಾಖಲೆಗಳ ಆಧಾರದ ಮೇಲೆ ವಂಚನೆ ನಡೆಸಿದ ಆರೋಪದ ಕುರಿತು ಎಫ್ಐಆರ್ಗೆ ಆದೇಶಿಸಿದ್ದರು. ಈಗಿನ ಪ್ರಕರಣದಿಂದ ಆಸ್ಪತ್ರೆಯ ಇನ್ನಷ್ಟು ಅಕ್ರಮಗಳು ಬೆಳಕಿಗೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.
