ಹಾಸನ: “ದತ್ತಿ ಪುರಸ್ಕೃತರನ್ನು ನಾವೆಲ್ಲರನ್ನೂ ಪರಿಗಣಿಸುವುದಿಲ್ಲ, ಸಾಹಿತ್ಯದಿಂದಲೇ ಗುರುತಿಸುತ್ತೇವೆ. ಕಸಾಪ ಈಗ ಸತ್ತು ಹೋಗಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಅಧ್ಯಕ್ಷರ ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು. ಎಲ್ಲಾ ಜಿಲ್ಲೆಯಲ್ಲೂ ಪರಿಷತ್ತುಗಳು ಹಾಳಾಗಿವೆ,” ಎಂದು ಮಾಣಿಕ್ಯ ಪ್ರಕಾಶನದ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ವಿಷಾದ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ನಡೆದ ಮಾಣಿಕ್ಯ ಪ್ರಕಾಶನದ ರಾಜ್ಯಮಟ್ಟದ 10ನೇ ಕವಿ ಕಾವ್ಯ ಸಂಭ್ರಮ ದಶಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. “ಲಾಬಿ ಮೀರಿ ಕೆಲಸ ಮಾಡಬೇಕು. ಬೇರೆ ಸಂಘಟನೆಗಳು ಇರದಿದ್ದರೆ ಕನ್ನಡದ ಕೆಲಸ ಮುಂದುವರಿಯುತ್ತಿರಲಿಲ್ಲ,” ಎಂದರು.
ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿದ ರವಿ ನಾಕಲಗೂಡು ಅವರು, “ದಶಮಾನೋತ್ಸವ ಆಚರಣೆ ಸಾಹಿತ್ಯ ಲೋಕದ ಮಹತ್ವದ ಕ್ಷಣ. ಸಾಹಿತ್ಯ ಸೇವೆಯು ಸಮಾಜ ಪರಿವರ್ತನೆಗೆ ಶಕ್ತಿಯಾಗಿದೆ,” ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಕೆ.ಎಸ್. ಭಗವಾನ್ ಅವರು ಮಾತನಾಡಿ, “ದೇಶದ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಶೋಷಿತ ವರ್ಗದ ನೋವಿನಿಂದ ಹುಟ್ಟಿದುದು. ಶೂದ್ರರಿಗೆ ಶಿಕ್ಷಣದ ಹಕ್ಕಿಲ್ಲದ ಕಾಲದಿಂದ ಇಂದಿನ ಪ್ರಗತಿವರೆಗೆ ನಮ್ಮ ಸಮಾಜ ದೀರ್ಘ ಪ್ರಯಾಣ ಮಾಡಿದೆ. ಸತ್ಯನಿಷ್ಠೆಯಿಂದ ಬರೆಯಿರಿ, ಯಾರನ್ನೂ ಮೆಚ್ಚಿಸಲು ಬರೆಯಬೇಡಿ,” ಎಂದರು. ಅವರು ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವಿದೆ ಎಂದೂ ಹೇಳಿದರು.
ಹೆಚ್.ಬಿ. ಮದನ್ಗೌಡ ಅವರು, “ಕಾರ್ಯಕ್ರಮ ಸಂಘಟನೆ ಈ ದಿನಗಳಲ್ಲಿ ಮಹತ್ವದ ಕೆಲಸವಾಗಿದೆ. ಹಲ್ಮಿಡಿ ಶಿಲಾಶಾಸನ ನೀಡಿದ ಹಾಸನ ಜಿಲ್ಲೆಯವರು ಎನ್ನುವುದು ಹೆಮ್ಮೆಯ ವಿಚಾರ,” ಎಂದು ಹೇಳಿದರು.

ಸರ್ವಾಧ್ಯಕ್ಷರಾದ ವಾಣಿ ಶೆಟ್ಟಿ ಅವರು, “ಸಾಮರಸ್ಯದ ಬದುಕಿಗೆ ಓದಿನ ಅಗತ್ಯ ಅನಿವಾರ್ಯ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು ಒಂದೇ — ಎಲ್ಲರಲ್ಲೂ ಮಾನವೀಯತೆ ಬೆಳೆಸಬೇಕು,” ಎಂದು ಉಪದೇಶಿಸಿದರು.
ನಾಗರಾಜ್ ಹೆತ್ತೂರು ಅವರು ಮಾಣಿಕ್ಯ ಪ್ರಕಾಶನದ ದಶಮಾನೋತ್ಸವವನ್ನು ಅಭಿನಂದಿಸಿ, “ದೀರ್ಘಕಾಲದ ಶ್ರಮ ಮತ್ತು ತ್ಯಾಗದಿಂದ ಸಂಸ್ಥೆ ಇಂದಿನ ಮಟ್ಟಕ್ಕೇರಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರ್ ಮೇಟಿ, ಸತೀಶ್ ಜವರೇಗೌಡ ಸೇರಿದಂತೆ ಸಾಹಿತ್ಯ ಲೋಕದ ಹಲವು ಗಣ್ಯರು, ಕವಿಗಳು, ಚಿಂತಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ದಿಲ್ಲಿ, ಗುಜರಾತ್, ನಾಸಿಕ್ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ಕನ್ನಡ ಸಂಘಟನೆಗಳು ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿವೆ ಎಂಬ ವಿಚಾರವೂ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಯಿತು.
