ಕೊರಟಗೆರೆ:- ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆಯಿತು. ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ತಾಲೂಕು ಯೋಜನಾಧಿಕಾರಿ ಅನಂತರಾಜು ಭಾಗವಹಿಸಿದ್ದರು.
ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಲೋಕೇಶ್ ರವರು ಗ್ರಾಮ ಪಂಚಾಯಿತಿ ಮತ್ತು ಇತರೆ ಇಲಾಖೆಗಳು ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಮತ್ತು 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು. ತಾಲೂಕು ಪಂಚಾಯಿತಿಯಿಂದ ಕಳೆದ ವರ್ಷಗಳ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಲಾಯಿತು.

ತಾಲೂಕು ಪಂಚಾಯಿತಿಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ವಿವರ ನೀಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಉಪಸ್ಥಿತರಿಲ್ಲದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ ಡಿ ಪ್ರಭಾಕರ್ ಮಾತನಾಡಿ ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವುದರ ಮೂಲಕ ಕೂಲಿ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದುದರಿಂದ ಉದ್ಯೋಗ ಪಡೆಯ ಬಯಸುವವರು ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.ನರೇಗಾ ಹಾಗೂ 15 ನೇ ಹಣಕಾಸಿನ ಅಡಿಯಲ್ಲಿ 82 ಲಕ್ಷ ಖರ್ಚು ಮಾಡಲಾಗಿದೆ. ಆದುದರಿಂದ ಗ್ರಾಪಂ ವ್ಯಾಪ್ತಿಯ ಪ್ರತಿ ಕುಟುಂಬವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖಾ ಎ ಡಿ ರುದ್ರಪ್ಪ, ಉಪಾಧ್ಯಕ್ಷೆ ಸರಸ್ವತಮ್ಮ ಮಂಜುನಾಥ್,ಅಭಿವೃದ್ಧಿ ಅಧಿಕಾರಿ ರಂಗನರಸಯ್ಯ,ಕಾರ್ಯಾದರ್ಶಿ ಮುನಿಯಯ್ಯ,ಸದಸ್ಯರಾದ ದ್ರಾಕ್ಷಾಯಣಿ, ಗೋವಿಂದರಾಜು,ಕರಿಯಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.
– ಶ್ರೀನಿವಾಸ್, ಕೊರಟಗೆರೆ.
