ಕೆ.ಆರ್.ಪೇಟೆ,ನ.12: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರಾದ ಹೆಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.

ಮಾರುಕಟ್ಟೆಯ ಪ್ರವೇಶ ದ್ವಾರದಿಂದ ಮಾರುಕಟ್ಟೆಯ ಒಳ ಆವರಣದಲ್ಲಿ ಸುಮಾರು 58ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಸುಮಾರು 13ಲಕ್ಷ ರೂ ವೆಚ್ಚದ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸಬೇಕಾದ ಜವಾಬ್ದಾರಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತೆಗೆದುಕೊಳ್ಳಬೇಕು. ರೈತರಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು.

ಲೈಸೆನ್ಸ್ ಪಡೆದುಕೊಂಡ ವರ್ತಕರಿಗೆ ಮಾತ್ರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಬೇರೆ ಯಾವುದೇ ಅನಧಿಕೃತ ವ್ಯಾಪಾರಿಗಳು ಬಂದು ರೈತರಿಗೆ ವ್ಯಾಪಾರದಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಇದನ್ನು ಸಮಿತಿಯ ಅಧಿಕಾರಿಗಳು ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿ ರೈತರಿಗೆ ಅನಧಿಕೃತ ವ್ಯಾಪಾರಿಗಳಿಂದ ಹಾಗೂ ಅಧಿಕೃತ ವ್ಯಾಪಾರಿಗಳಿಂದಲೂ ಬೆಲೆ ಹಾಗೂ ತೂಕದಲ್ಲಿ ಯಾವುದೇ ಮೋಸವಾಗದಂತೆ ನೋಡಿಕೊಳ್ಳಬೇಕು. ಲೈಸೆನ್ಸ್ ಇಲ್ಲದೇ ವ್ಯಾಪಾರ ಮಾಡಲು ಬರುವ ವರ್ತಕರಿಗೆ ಲೈಸೆನ್ಸ್ ಮಾಡಿಸಿಕೊಂಡು ವ್ಯಾಪಾರ ಆರಂಭಿಸುವಂತೆ ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ನಮ್ಮ ಕೆ.ಆರ್.ಪೇಟೆಯ ಎಳೆನೀರು ಮಾರುಕಟ್ಟೆಯು ಇಡೀ ರಾಜ್ಯದಲ್ಲಿಯೇ ಉತ್ತಮ ಗುಣಮಟ್ಟದ ಎಳೆನೀರು ಉತ್ಪಾದನೆ ಮಾಡುವ ಮಾರುಕಟ್ಟೆ ಎಂಬ ಕೀರ್ತಿಗೆ ಭಾಜನವಾಗಿದೆ ನಮ್ಮ ಕೆ.ಆರ್.ಪೇಟೆ ಮಾರುಕಟ್ಟೆಯ ಎಳೆನೀರಿಗೆ ಮುಂಬೈ, ದೆಹಲಿ, ಗುಜರಾತ್, ಮಧ್ಯಪ್ರದೇಶ, ಬಿಹಾರ್ ಸೇರಿದಂತೆ ದೇಶಾದ್ಯಂತ ಉತ್ತಮ ಬೇಡಿಕೆ ಇರುತ್ತದೆ. ವರ್ತಕರು ರೈತರಿಗೆ ಉತ್ತಮ ಬೆಲೆ ನೀಡಿ ಎಳೆನೀರು ಕೊಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ಕಡಿಮೆ ಬೆಲೆ ನೀಡಿ ಮೋಸ ಮಾಡಬಾರದು. ರೈತರು ತಮ್ಮ ಎಳನೀರನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕು. ಜಮೀನಿನ ಬಳಿ ಬರುವ ವ್ಯಾಪಾರಿಗಳು ತಮಗೆ ಬೆಲೆಯಲ್ಲಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾರುಕಟ್ಟೆಗೆ ತಂದು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ರೈತರಿಗೆ ಸಲಹೆ ನೀಡಿದರು.
ಖ
ಈ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕೆ.ಆರ್.ಪೇಟೆ ಎಪಿಎಂಸಿ ಆಡಳಿತಾಧಿಕಾರಿಗಳಾದ ರೇವತಿ ಬಾಯಿ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗೌರಿಶಂಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಸೀಬ್, ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ಪುರಸಭೆಯ ಮಾಜಿ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ದಿನೇಶ್, ವಿಶ್ವನಾಥ್, ಪ್ರಥಮ ದರ್ಜೆ ಗುತ್ತಿಗೆದಾರ ದ್ಯಾವೇನಹಳ್ಳಿ ಡಿ.ಹೆಚ್.ವರುಣ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
===========================
