ಕೇರಳದಲ್ಲಿ ನೇಗ್ಲೇರಿಯಾ ಫೌಲೇರಿ (Naegleria fowleri) ಎಂಬ ಅಪರೂಪದ ‘ಮಿದುಳು ತಿನ್ನುವ ಅಮೀಬಾ’ ಸೋಂಕಿನ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರೆಗೆ ತೆರಳುತ್ತಿರುವ ಭಕ್ತರಿಗೆ ಆರೋಗ್ಯ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಬೆಚ್ಚಗಿನ ಸಿಹಿನೀರಿನಲ್ಲಿ ಹೆಚ್ಚು ವಾಸಿಸುವ ಈ ಅಮೀಬಾ ಅತ್ಯಂತ ವಿಷಕಾರಿ ಸ್ವರೂಪದ್ದಾಗಿದ್ದು, ಮೂಗಿನಿಂದ ದೇಹಕ್ಕೆ ಪ್ರವೇಶಿಸಿದಾಗ ನೇರವಾಗಿ ಮೆದುಳನ್ನು ಹಾನಿಗೊಳಿಸಿ ಅಮೀಬಿಕ್ ಮೆನಿಂಗೋಎನ್ಸೆಫಲೈಟಿಸ್ ಎನ್ನುವ ಗಂಭೀರ ಮತ್ತು ಜೀವಾಪಾಯಕರ ಕಾಯಿಲೆಯನ್ನು ಉಂಟುಮಾಡುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಆರೋಗ್ಯ ಇಲಾಖೆಯಿಂದ ಹೊರಡಿಸಿದ ಪ್ರಮುಖ ಸಲಹೆಗಳು
1. ನೇಗ್ಲೇರಿಯಾ ಫೌಲೇರಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುವ ಸೂಕ್ಷ್ಮಜೀವಿ:
ನಿಂತ ನೀರು, ಕೆರೆಗಳು, ಕೊಳ/ಈಜುಕೊಳಗಳು ಮತ್ತು ಶುದ್ಧೀಕರಣ ಸರಿಯಾಗಿಲ್ಲದ ಜಲಮೂಲಗಳಲ್ಲಿ ಹೆಚ್ಚು ಬೆಳೆಯುತ್ತದೆ.
2. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ:
ಕಲುಷಿತ ನೀರನ್ನು ಕುಡಿಯುವುದರಿಂದಲೂ ಸೋಂಕು ಬರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
3. ಯಾತ್ರಿಕರು ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ವಿಶೇಷ ಜಾಗ್ರತೆ:
- ನಗೇರಿಯಾ ಮೂಗಿನ ಮೂಲಕ ಪ್ರವೇಶಿಸುವುದರಿಂದ,
- ಸ್ನಾನ ವೇಳೆ ಮೂಗಿನ ಕ್ಲಿಪ್ ಬಳಸುವುದು
- ಅಥವಾ ಮೂಗು ಬಿಗಿಯಾಗಿ ಮುಚ್ಚಿಕೊಂಡು ನೀರಲ್ಲಿ ಇಳಿಯುವುದು
ಎಂಬ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆ ತೀವ್ರವಾಗಿ ಶಿಫಾರಸು ಮಾಡಿದೆ.
4. ಸೋಂಕಿನ ಸಾಧ್ಯತೆಯ 7 ದಿನಗಳೊಳಗೆ ಕಾಣಿಸಬಹುದಾದ ಲಕ್ಷಣಗಳು
- ಜ್ವರ
- ತೀವ್ರ ತಲೆನೋವು
- ವಾಕರಿಕೆ/ವಾಂತಿ
- ಕುತ್ತಿಗೆ ಬಿಗಿತ
- ಗೊಂದಲ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ
- ವರ್ತನೆಯಲ್ಲಿ ಅಸ್ವಸ್ಥತೆ
ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಬೇಕು ಎಂದು ಇಲಾಖೆ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆ ಹೊರಡಿಸಿ, ಯಾತ್ರಿಕರ ಸುರಕ್ಷತೆಗಾಗಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
