ಕೆ.ಆರ್.ಪೇಟೆ,ನ.25: ತಾಲ್ಲೂಕಿನ ಬೂಕನಕೆರೆ ಗ್ರಾಮದ ಸುಪುತ್ರ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಸುಮಾರು 15ಕೋಟಿ ರೂ ಅನುಧಾನ ನೀಡಿ ನಿರ್ಮಿಸಿರುವ 24/7 ಹೈಟೆಕ್ ಸಮುದಾಯ ಆರೋಗ್ಯ ಆಸ್ಪತ್ರೆಯನ್ನು ಮುಚ್ಚಿ, ಸಾಮಾನ್ಯ ಆರೋಗ್ಯವನ್ನಾಗಿ ಕೆಳದರ್ಜೆಗೆ ಇಳಿಸಿ ಶಿಫಾರಸ್ಸು ಮಾಡಿರುವ ಅರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಅವರ ಮೆಡಿಕಲ್ ಮಾಫಿಯಾ ಹಾಗೂ ಖಾಸಗಿ ಆಸ್ಪತ್ರೆ ಮಾಫಿಯಾ ನಿರ್ಧಾರ ಖಂಡಿಸಿ, ಕೇವಲ ಹಣ ಉಳಿಸುವ ದೃಷ್ಟಿಯಿಂದ ಆಸ್ಪತ್ರೆಯನ್ನು ಮುಚ್ಚುವ ನಿರ್ಧಾರ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಬೂಕನಕೆರೆ ಗ್ರಾಮದ ಹಾಗೂ ಹೋಬಳಿಯ ಸಾವಿರಾರು ನಾಗರೀಕರು, ಬೂಕನಕೆರೆ ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ಬೂಕನಕೆರೆ ಬಂದ್ ನಡೆಸಿ, ಗ್ರಾಮ ದೇವತೆ ಗೋಗಾಲಮ್ಮ ದೇವಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬೂಕನಕೆರೆ ಸಂಪೂರ್ಣ ಬಂದ್ ನಡೆಸಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷಗುಪ್ತ ಅವರ ಗ್ರಾಮೀಣ ಜನ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಹರ್ಷಗುಪ್ತ ಅವರ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯು ಸೇವಾ ಕ್ಷೇತ್ರ ಎಂಬುದನ್ನು ಮರೆತು, ಆಧಾಯ ತರುವ ಕ್ಷೇತ್ರವೆಂದು ತಿಳಿದಿರುವ ಹರ್ಷಗುಪ್ತ ಅವರು ನಗರ ಪ್ರದೇಶದ ಹೆರಿಗೆ ಆಸ್ಪತ್ರೆಗಳ ಲಾಭಿ, ಮೆಡಿಕಲ್ ಲಾಭಿ, ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು ನೂರಾರು ಕೋಟಿ ಕಿಕ್ಬ್ಯಾಕ್ ಪಡೆದುಕೊಂಡು ಗ್ರಾಮೀಣ ಜನರ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದ 24/7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 241ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು. ಹರ್ಷಗುಪ್ತ ಅವರು ಗ್ರಾಮೀಣ ಪ್ರದೇಶದ ಸುಮಾರು 241ಸಮುದಾಯ ಆರೋಗ್ಯ ಆಸ್ಪತ್ರೆಗಳನ್ನು ಬಂದ್ ಮಾಡಿದರೆ ಸರ್ಕಾರಕ್ಕೆ ವಾರ್ಷಿಕ 1500ಕೋಟಿ ಉಳಿತಾಯವಾಗುತ್ತದೆ ಎಂದು ಹಾಗಾಗಿ ತಾವು ಶಿಫಾರಸ್ಸು ಮಾಡಿರುವ ಗ್ರಾಮೀಣ ಪ್ರದೇಶದ 241 ಸಮುದಾಯ ಆಸ್ಪತ್ರೆಗಳನ್ನು ಬಂದ್ ಮಾಡಿ ಸಮೀಪದ ಆಸ್ಪತ್ರೆಗೆ ವಿಲೀನಗೊಳಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡಲು ಮುಂದಾಗಿದ್ದಾರೆ.

ಸರ್ಕಾರವು ಹರ್ಷಗುಪ್ತ ಅವರು 1500ಕೋಟಿ ಹಣ ಉಳಿಯುತ್ತದೆ ಎಂದು ಹೇಳಿದ್ದೇ ತಡ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಪರದಾಡುತ್ತಿರುವ ಸರ್ಕಾರವು ರಾಜ್ಯಾದ್ಯಂತ ಗ್ರಾಮೀಣ ಭಾಗದ 241ಆಸ್ಪತ್ರೆಗಳನ್ನು ಮುಚ್ಚುವುದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮವನ್ನು ಪರಿಶೀಲನೆ ಮಾಡದೇ ಸದನದಲ್ಲಿ ಯಾವುದೇ ಚರ್ಚೆಯನ್ನೂ ಸಹ ಮಾಡದೇ ಸದನದಲ್ಲಿ ಅಂಗೀಕಾರ ಮಾಡಿದಂತೆ ಮಾಡಿ ಆಸ್ಪತ್ರೆಗಳನ್ನು ಬಂದ್ ಮಾಡುವ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ ಇದು ಗ್ರಾಮೀಣ ಜನರ ಪಾಲಿಗೆ ಮರಣ ಶಾಸನವಾಗಿದೆ ಹಾಗಾಗಿ ಕೂಡಲೇ ಈ ಗೆಜೆಟ್ ನೋಟಿಫಿಕೇಷನ್ ಅನ್ನು ರದ್ದು ಮಾಡಿ ಡಿನೋಟಿಫಿಕೇನ್ ಮಾಡಿ ನಮ್ಮ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿರುವ 24/7 ಹೈಟೆಕ್ ಸಮುದಾಯ ಆರೋಗ್ಯ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲಾ 241 ಸಮುದಾಯ ಆರೋಗ್ಯ ಕೇಂದ್ರಗಳನ್ನು ಪುನರ್ ಆರಂಭಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರ ನಿವಾಸದ ಮುಂದೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ರಾಜೇಗೌಡ, ಬೂಕನಕೆರೆ ಹೈಟೆಕ್ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಜ್ಞಾನಸಿಂಧು, ಅಂಗಡಿ ನಾಗರಾಜು, ಬೂಕನಕೆರೆ ಗ್ರಾ.ಪಂ.ಅಧ್ಯಕ್ಷ ಶ್ಯಾಂಪ್ರಸಾದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮೀನಾಕ್ಷಿಪುಟ್ಟರಾಜು, ಹೆಳವೇಗೌಡ (ಹುಲ್ಲೇಗೌಡ), ಬಿ.ಜವರಾಯಿಗೌಡ, ಗ್ರಾ.ಪಂ.ಸದಸ್ಯೆ ರಾಜೇಶ್ವರಿ, ಮುಖಂಡರಾದ ಬಿ.ಎಸ್. ಮಹೇಶ್ ಅಡಿಕೆಸ್ವಾಮೀಗೌಡ, ಬೂಕನಕೆರೆ ಮಧುಸೂಧನ್, ಶಂಭುಲಿಂಗಶೆಟ್ಟಿ, ಬಿ.ಬಾಚಹಳ್ಳಿ ಪ್ರಸನ್ನ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ನಾಗೇಶ್, ಚೋಕನಹಳ್ಳಿ ಪ್ರಕಾಶ್ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಗ್ರಾ.ಪಂ.ಸದಸ್ಯರು, ಸೊಸೈಟಿ ಹಾಗೂ ಹಾಲಿನ ಡೇರಿ ನಿರ್ದೇಶಕರು ಸೇರಿದಂತೆ ಬೂಕನಕೆರೆ ಹೋಬಳಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ತಾಲ್ಲೂಕು ಸೇವಂತಿಗೆ ಹೂ ವರ್ತಕರ ಸಂಘ ಬೂಕನಕೆರೆ, ಬೂಕನಕೆರೆ ಗೋಗಾಲಮ್ಮ ದೇವಿ ಯುವಕರ ಸಂಘ, ಬೂಕನಕೆರೆ ರಾಜಸ್ತಾನ್ ಸೇವಾ ಸಮಿತಿ ಸದಸ್ಯರು ಸೇರಿದಂತೆ ಬೂಕನಕೆರೆ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯ ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡ ಹಾಗೂ ನಾಡಕಚೇರಿಯ ಅಧಿಕಾರಿಗಳು, ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

– ಶ್ರೀನಿವಾಸ್ ಆರ್.
