ಚಿಕ್ಕಮಗಳೂರು: ಮೂಲಸೌಕರ್ಯ ಕೊರತೆಯಿಂದಲೇ ಸುದ್ದಿಯಲ್ಲಿದ್ದ ಚಿಕ್ಕಮಗಳೂರು ವೈದ್ಯಕೀಯ ಕಾಲೇಜು, ಈಗ ಲೈಂಗಿಕ ಶೋಷಣೆ ಆರೋಪದ ಹೊಸ ವಿವಾದಕ್ಕೆ ಸಿಲುಕಿದೆ. ಹಾಲಿ ಮತ್ತು ಮಾಜಿ ಶಾಸಕರ ಪರಸ್ಪರ ಆರೋಪ–ಪ್ರತ್ಯಾರೋಪಗಳಿಂದ ಕಾವು ತಣ್ಣಗಾಗುತ್ತಿದ್ದಂತೆಯೇ, ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದು, ಕಾಲೇಜಿನ ಗೌರವ ಮತ್ತೆ ಪ್ರಶ್ನೆಗೆ ಒಳಗಾಗಿದೆ.
ಏನಿದು ಆರೋಪ?
ವಿದ್ಯಾರ್ಥಿನಿಯೊಬ್ಬರು ಕಾಲೇಜಿನ ಪ್ರಾಧ್ಯಾಪಕ ಡಾ. ಗಂಗಾಧರ ಅವರ ವಿರುದ್ಧ ಅಸಭ್ಯ ಮೆಸೇಜ್ಗಳನ್ನು ಕಳುಹಿಸಿದರೆಂದು, ಹಾಗೆಯೇ ತಾನು ಅವರ ಮಾತು ಕೇಳದ ಕಾರಣ ‘ಹಾಜರಾತಿ ಕೊರತೆ’ ಯ ನೆಪದಲ್ಲಿ ಪರೀಕ್ಷೆಗೆ ಬಿಡಲಿಲ್ಲ ಎಂದು ದೂರಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿಯ ಹೇಳಿಕೆಯೊಂದನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ನಂತರ, ಕಾಲೇಜಿನ ಪ್ರಾಧ್ಯಾಪಕರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ, “ಕಾಲೇಜಿನ ಹೆಸರಿಗೆ ಧಕ್ಕೆ ಆಗುತ್ತಿರುವ ತಪ್ಪುಮಾಹಿತಿ ಮತ್ತು ವಿಡಿಯೋಗಳನ್ನು ತಡೆಯಬೇಕು” ಎಂದು ಮನವಿ ಮಾಡಿದ್ದಾರೆ.
ಕಾಲೇಜು–ಪೋಲಿಸ್–ಪೋಶ್ ಸಮಿತಿ ಪ್ರತಿಕ್ರಿಯೆಗಳು
- “ವಿದ್ಯಾರ್ಥಿನಿಯಿಂದ ಕಾಲೇಜಿಗೆ ಯಾವುದೇ ಲಿಖಿತ ದೂರು ಬಂದಿಲ್ಲ. ಪೋಶ್ ಸಮಿತಿ ಅಥವಾ ಆಂತರಿಕ ತನಿಖಾ ಸಮಿತಿಗೂ ದೂರು ನೀಡಿಲ್ಲ. ಇದು ಎರಡು ವರ್ಷಗಳ ಹಳೆಯ ವೈಯಕ್ತಿಕ ವಿಷಯವಾಗಿರಬಹುದು” ಎಂದು ಪ್ರಾಧ್ಯಾಪಕರ ಪರದ ಮನವಿಯಲ್ಲಿ ಹೇಳಲಾಗಿದೆ.
- ಡೀನ್ ಡಾ. ಹರೀಶ್ ಪ್ರತಿಕ್ರಿಯಿಸಿ: “ಸೋಶಿಯಲ್ ಮೀಡಿಯಾದಲ್ಲಿ ಆರೋಪಗಳ ವಿಡಿಯೋ ಕಂಡು ನಾವು ನೋಟಿಸ್ ನೀಡಿದ್ದೇವೆ. ಬುಧವಾರ ಪೋಶ್ ಸಮಿತಿ ಸಭೆ ನಡೆಯಲಿದ್ದು, ವಿಚಾರಣೆ ನಡೆಯಲಿದೆ” ಎಂದಿದ್ದಾರೆ.
- ಪ್ರಾಧ್ಯಾಪಕ ಡಾ. ಗಂಗಾಧರ: “ಹಾಜರಾತಿ ಕೊರತೆ ಮತ್ತು ಅಂಕ ಸಮಸ್ಯೆಗಳ ಹಿನ್ನೆಲೆ ನನ್ನ ಹೆಸರನ್ನು ಬಳಸಿ ತೇಜೋವಧೆ ಮಾಡಲಾಗಿದೆ. ನನ್ನ ಬಳಿಯೂ ಸಾಕ್ಷಿಗಳಿವೆ, ಸಮಯ ಬಂದಾಗ ನೀಡುತ್ತೇನೆ” ಎಂದು ಹೇಳಿದ್ದಾರೆ.
ವಿವಾದದ ಹಿನ್ನೆಲೆಯಲ್ಲಿ
ಸ್ಥಳಾಂತರ ಮಾಡಿರುವ ಪ್ರದೇಶದಲ್ಲಿ ಸ್ವ ಪ್ರತಿಷ್ಠೆಗಾಗಿ ನಿರ್ಮಿಸಲಾದ ವೈದ್ಯಕೀಯ ಕಾಲೇಜು, ಸ್ಥಾಪನೆಯಿಂದಲೇ ಮೂಲಸೌಕರ್ಯ ವಿವಾದದಲ್ಲಿ ಸಿಲುಕಿದ್ದು, ಈಗ ಲೈಂಗಿಕ ಶೋಷಣೆ ಆರೋಪದ ಪ್ರಕರಣವೂ ಸೇರಿ ಕಾಲೇಜಿನ ಹೆಸರಿಗೆ ಮತ್ತೆ ಮಸಿ ತಟ್ಟಿದೆ.
