ಚನ್ನರಾಯಪಟ್ಟಣ :ಭಾರತ ಸಂವಿಧಾನವು ಕೇವಲ ಕಾನೂನು ಗ್ರಂಥವಲ್ಲ ಅದು ಜೀವನ ನಡೆಸಲು ಬೇಕಾಗುವ ದಾರಿದೀಪ ಹಾಗೂ ಪ್ರಜಾಪ್ರಭುತ್ವಕ್ಕೆ ಸ್ಪೂರ್ತಿಯಸಲೆ ಎಂದು ಸರ್ಕಾರಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನ ಉಪನ್ಯಾಸಕರಾದ ರತ್ನಾಕರ್ ಅಭಿಪ್ರಾಯಪಟ್ಟರು.
ಅವರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನವಂಬರ್ 26 ಸಂವಿಧಾನ ಸಮರ್ಪಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಭಾರತ ದೇಶವು ವಿವಿಧ ಜಾತಿ ಧರ್ಮಗಳ ವಿವಿಧ ಭಾಷೆಗಳ ವೈವಿಧ್ಯತೆಯ ವೈರುಧ್ಯತೆಯ ದೇಶ ಇಂತಹ ದೇಶಕ್ಕೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂವಿಧಾನವನ್ನು ನೀಡಿದಂತಹ ಕೀರ್ತಿ ಬಾಬಾ ಸಾಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ನಾವು ನಾವು ಭಾರತದ ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳದ ಹೊರತು ಸಂವಿಧಾನ ಅರ್ಥವಾಗುವುದಿಲ್ಲ ಹಾಗಾಗಿ ಭಾರತದ ಸಾಮಾಜಿಕ ಇತಿಹಾಸವನ್ನು ಚೆನ್ನಾಗಿ ಹರಿತಂತಹ ಅಂಬೇಡ್ಕರ್ ಅವರಂತಹ ಮೇಧಾವಿ ಇಂದ ಮಾತ್ರ ಇಂಥ ಶ್ರೇಷ್ಠ ಸಂವಿಧಾನವನ್ನು ಸಾಧ್ಯವಾಗಿತ್ತು ನಮ್ಮೆಲ್ಲರ ಪುಣ್ಯ ಎಂದರು.

ವಿದ್ಯಾರ್ಥಿಗಳು ಯುವಜನತೆ ಸಂವಿಧಾನವನ್ನು ಅರಿತುಕೊಳ್ಳುವ ಮೂಲಕ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭಾರತ ದೇಶವು ಪ್ರಭುದ್ಧ ದೇಶವಾಗುವುದರ ಜೊತೆಗೆ ಸಾಮರಸ್ಯ ಜೀವನ ನಡೆಸಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿ ಮನೆಮನೆಗಳಲ್ಲಿ ಸಂವಿಧಾನ ಗ್ರಂಥದ ಓದುವಿಕೆಯ ಅಭಿಯಾನ ಈ ಸಂದರ್ಭದಲ್ಲಿ ಅತ್ಯಂತ ಅಗತ್ಯ ಎಂದರು, ಸಂವಿಧಾನವು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತತ್ವ ಎಂಬ ಮೂರು ಮಂತ್ರಗಳ ಸಮಿಶ್ರಣಗಳ ಆಶಯದ ಮೂಲಕ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಆಧಾರ ಸ್ತಂಭವಾಗಿದೆ ಹಾಗಾಗಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರವಣಬೆಳಗೋಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಅವರು ಮಾತನಾಡಿ ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ ನೀಡಿದಂತಹ ಅಂಬೇಡ್ಕರ್ ಅವರನ್ನು ಈ ದಿನ ನೆನಪು ಮಾಡಿಕೊಳ್ಳುವುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ಭಾರತ ದೇಶವು ಇಂದು ಆರ್ಥಿಕವಾಗಿ ಪ್ರಪಂಚದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಅಂಬೇಡ್ಕರ್ ಅವರ ರಚಿಸಿದ ಸಂವಿಧಾನವೇ ಕಾರಣ ಹಾಗಾಗಿ ನಮ್ಮ ದೇಶದ ಪ್ರತಿ ಏಳಿಗೆಯಲ್ಲಿ ಸಂವಿಧಾನದ ಹಕ್ಕು ಬಾಧ್ಯತೆಗಳು ಅಡಗಿವೆ ಅವುಗಳನ್ನು ಗೌರವಿಸಬೇಕಾದದ್ದು ಹಾಗೂ ಸಂವಿಧಾನವನ್ನು ಅರಿತುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಟಿ ಎ ಪಿ ಎಂ ಸಿ ಅಧ್ಯಕ್ಷರಾದ ವೆಂಕಟೇಶಮೂರ್ತಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಪ್ರಕಾಶ್, ತಾಲೂಕು ದಂಡಾಧಿಕಾರಿಗಳಾದ ಶಂಕರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳಾದ ಜಿ ಆರ್ ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ತ್ಯಾಗರಾಜ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಆದೀಕ್ಷಕ ಮೋಹನ್, ಸೇರಿದಂತೆ ಇತರರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಲೋಕೇಶ್ ನಿರೂಪಿಸಿದ್ದರು. ಕಾರ್ಯಕ್ರಮದಲ್ಲಿ ಶಂಕರ್ ದಮ್ಮನಿಂಗಲ, ಎಸ್ ಆರ್ ಕಂಠಿ ಹಾಗೂ ಸೋಮಶೇಖರ್ ಇವರುಗಳು ಸಂವಿಧಾನ ಗೀತೆಯನ್ನೂ ಸಾದರಪಡಿಸಿದ್ದರು. ಸಂವಿಧಾನ ಪೀಠಿಕೆಯನ್ನು ಇಂದಿರಾಗಾಂಧಿ ವಸತಿ ಶಾಲೆಯ ಮಕ್ಕಳು ವಾಚನ ಮಾಡಿದರು.
– ಮಂಜುನಾಥ್ ಐ ಕೆ
