ಹೋಳೆನರಸೀಪುರ/ಹಳ್ಳಿಮೈಸೂರು: ಹಳ್ಳಿಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಹಣಾ ಗೊಂದಲ, ಸಿಬ್ಬಂದಿ ಕೊರತೆ ಮತ್ತು ಅಸಮರ್ಪಕ ಸೇವೆ ಆಳುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ಹೊಳೆನರಸೀಪುರ ತಾಲ್ಲೂಕು ಘಟಕವು ಗಂಭೀರ ಆಕ್ಷೇಪಣೆ ಹೊರಹಾಕಿದ್ದು, ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದೆ.
ಆಸ್ಪತ್ರೆಯಲ್ಲಿ 6 ಶುಶ್ರೂಕಿಯರ ಹುದ್ದೆ ಇದ್ದರೂ ಪ್ರಸ್ತುತ 3 ಮಂದಿ ಮಾತ್ರ ಸೇವೆ ನೀಡುತ್ತಿರುವುದು ರೋಗಿಗಳ ಆರೈಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿನಿತ್ಯ 380–420 ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಹಿನ್ನೆಲೆಯಲ್ಲಿ ಸೀಮಿತ ಸಿಬ್ಬಂದಿಯಿಂದ ಸೇವೆ ನೀಡುವುದು ಅಸಾಧ್ಯವಾಗಿದ್ದು, ಜಗಳ–ಗಲಾಟೆಗಳು ಹೆಚ್ಚುತ್ತಿರುವುದಾಗಿ ವೇದಿಕೆ ತಿಳಿಸಿದೆ. ವಿಶೇಷವಾಗಿ ಸಂಜೆ 4.30ರಿಂದ ಬೆಳಗ್ಗೆ 7.30ರ ನಡುವೆ ಮಾತ್ರವೇ 60–70 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ಅಗತ್ಯ ಸೇವೆಗಳು ಲಭ್ಯವಾಗುತ್ತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ.
ಹೆರಿಗೆ ಪ್ರಕರಣಗಳು ಹಾಗೂ ಗರ್ಭಿಣಿಯರ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ನೋಡಲು ಸಿಬ್ಬಂದಿ ದೊರೆಯದೆ, ಅವರನ್ನು ಸಾಲಿಗ್ರಾಮ ಅಥವಾ ಹೊಳೆನರಸೀಪುರಕ್ಕೆ ಕಳುಹಿಸುತ್ತಿರುವುದು “ಮಾನವೀಯತೆಯ ವಿರೋಧಿ ಮತ್ತು ಜೀವಕ್ಕೆ ಅಪಾಯ” ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ಷೇಪಿಸಿದೆ.
“ಜನರ ಆರೋಗ್ಯ ಹಕ್ಕುಗಳ ರಕ್ಷಣೆಯೇ ಸರ್ಕಾರದ ಜವಾಬ್ದಾರಿ” ಎಂದು ತಿಳಿಸಿದ ವೇದಿಕೆ, ತಕ್ಷಣ ವೈದ್ಯರು, ಶುಶ್ರೂಕರು ಮತ್ತು ತುರ್ತು ಚಿಕಿತ್ಸಾ ಸಿಬ್ಬಂದಿಯನ್ನು ನೇಮಿಸಲು ಒತ್ತಾಯಿಸಿದೆ.
ಈ ಕುರಿತು ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆ ಈಡೇರಿಸದಿದ್ದಲ್ಲಿ, ತಾಲ್ಲೂಕು ಅಧ್ಯಕ್ಷ ಓಹಿಲೇಶ್ ರವರ ನೇತೃತ್ವದಲ್ಲಿ ಹಳ್ಳಿಮೈಸೂರು ಹೋಬಳಿ ಹಾಗೂ ಹೊಳೆನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಉಗ್ರ ಪ್ರತಿಭಟನೆ, ಧರಣಿ ಹಾಗೂ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
“ಸ್ನೇಹಕ್ಕೂ ಬದ್ದ — ಸಮರಕ್ಕೂ ಸಿದ್ಧ” ಎಂದು ಹೇಳಿರುವ
ನವೀನ್ ಕುಮಾರ್ ಎಂ.ಪಿ,
ತಾಲೂಕು ಯುವ ಘಟಕದ ಅಧ್ಯಕ್ಷರು,
ಕರ್ನಾಟಕ ರಕ್ಷಣಾ ವೇದಿಕೆ, ಹೊಳೆನರಸೀಪುರ
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
