ಕೊರಟಗೆರೆ :- ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕನ್ನಿಕಾ ಮಹಲ್ನಲ್ಲಿ ವಾಸವಿ ಯುವಜನ ಸಂಘದಿಂದ ಆಯೋಜಿಸಲಾದ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಂದು ಸಮುದಾಯಗಳಲ್ಲಿಯೂ ಬಡತನವೆಂಬುದು ಎದ್ದು ಕಾಣುತ್ತಿದೆ, ಬಡತನವನ್ನು ನಿರ್ಮೂಲನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲು ಸಂಘ-ಸಂಸ್ಥೆಗಳು ಹೆಚ್ಚಾಗಿ ಮುಂದೆ ಬರಬೇಕು ಎಂದು ಹೇಳಿದರು. ವಾಸವಿ ಯುವಜನ ಸಂಘವು ಸಮಾಜಮುಖಿ ಕಾರ್ಯಗಳಲ್ಲೂ ಸಹ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮಾನವೀಯ ಮೌಲ್ಯಗಳು ಇಲ್ಲದೇ ಹೋದರೆ ಎಷ್ಟೇ ದೊಡ್ಡ ಗುರಿ ಇದ್ದರು ತಲುಪುವುದು ಅಸಾಧ್ಯ, ವಾಸವಿ ಸಂಘವು ಇನ್ನಷ್ಟು ಬಲಿಷ್ಟಗೊಳ್ಳಬೇಕು ಎಂದರು.
ತುಮಕೂರು ಪ್ರೇರಕ ತರಬೇತುದಾರ ಡಾ.ಚೈತನ್ಯ ವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ, ಮಕ್ಕಳ ಅಭಿರುಚಿ, ಆಸಕ್ತಿ, ಪರಿಣತಿ ಗುರುತಿಸಿ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು. ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕೆಲಸಕ್ಕೆ ಮುಂದಾದಾಗ ಸೋಲು ಎದುರಾಗುವುದು ಸಹಜ. ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನುಗ್ಗಬೇಕು. ಜೀವನದಲ್ಲಿ ಪ್ರಾಮಾಣಿಕತೆ, ಸಮಯಪಾಲನೆ, ವಿಶ್ವಾಸಾರ್ಹತೆ, ಸತತ ಪರಿಶ್ರಮ, ಶ್ರದ್ಧೆ ಮುಖ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಮಕ್ಕಳಿಗೆ ವಾಸವಿ ಯುವಜನ ಸಂಘದ ಮುಖ್ಯಸ್ಥರು ಗೌರವಿಸಿ ಶುಭಹಾರೈಸಿದರು.
ಅತಿಥಿಗಳಾದ ಸುಷ್ಮಾರಾಣಿ, ಎಂ.ಜಿ ಸುಧೀರ್, ವಿದ್ಯಾ ಪ್ರಸಾದ್, ಎಂ.ಜಿ ಬದರಿಪ್ರಸಾದ್, ಹೆಚ್.ಜಿ ಕೃಷ್ಣಯ್ಯ ಶೆಟ್ಟಿ, ಕೆ.ಎಲ್ ಲಕ್ಷ್ಮೀ ಶ್ರೀನಿವಾಸ್, ಸೇರಿದಂತೆ ಇತರರು ಇದ್ದರು.
ವರದಿ : ಶ್ರೀನಿವಾಸ್ ಕೊರಟಗೆರೆ
