ಹಾಸನ : ಮಕ್ಕಳ ದೇಹ–ಮನಸ್ಸಿನ ಸಮಗ್ರ ಅಭಿವೃದ್ಧಿಗೆ ಕ್ರೀಡೆ ಅತಿಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 28ನೇ ರಾಜ್ಯಮಟ್ಟದ ಶ್ರೀ ಆದಿಚುಂಚನಗಿರಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, “ಉಸಿರು ಇಲ್ಲದೆ ದೇಹ ಬದುಕಲಾರದೆ, ಕ್ರೀಡೆಯಿಲ್ಲದೆ ಆರೋಗ್ಯ ಕಾಪಾಡಲಾಗದು. ಶತಮಾನ ಬದುಕಲು ಆಟೋಟ ಅವಶ್ಯಕ” ಎಂದು ಸಂದೇಶ ನೀಡಿದರು.

28 ವರ್ಷಗಳ ಹಿಂದೆ ಭೈರವೈಕ್ಯ ಡಾ. ಬಾಲಗಂಗಾಧರ ಮಹಾಸ್ವಾಮೀಜಿ ಪ್ರಾರಂಭಿಸಿದ ಈ ಕ್ರೀಡಾಕೂಟ, ಎರಡು ವರ್ಷ ಹೊರತುಪಡಿಸಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಮೊಟ್ಟಮೊದಲಿಗೆ ಶಿವಮೊಗ್ಗದಲ್ಲಿ ಆರಂಭವಾದ ಕೂಟ, ಈ ಹಿಂದೆ 13ನೇ ಬಾರಿ ಹಾಸನದಲ್ಲಿ ನಡೆಯಿತ್ತು. ಈಗ 28ನೇ ಕೂಟವೂ ಹಾಸನದಲ್ಲೇ ಸಾಗುತ್ತಿರುವುದು ವಿಶೇಷ. ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರು–ಅಧಿಕಾರಿಗಳ ಸಹಕಾರದಿಂದ ಉತ್ತಮ ಸಂಘಟನೆ ನಡೆದಿದೆ ಎಂದು ಮಹಾಸ್ವಾಮೀಜಿ ಪ್ರಶಂಸಿಸಿದರು.
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಮಾತು ಉಲ್ಲೇಖಿಸಿದ ಅವರು, “ಭಾರತೀಯರು ಕ್ರೀಡೆಗೆ ಬೆಂಬಲ–ಪ್ರೋತ್ಸಾಹ ನೀಡುವಲ್ಲಿ ಮುಂದಿದ್ದರೂ ಅಭ್ಯಾಸ ಮತ್ತು ತರಬೇತಿಯಲ್ಲಿ ಹಿಂದೆ ಇದ್ದೇವೆ. ಆದ್ದರಿಂದ ವಿಶ್ವದ ಅತಿ ಹೆಚ್ಚು ಯುವಶಕ್ತಿ ಹೊಂದಿದ್ದರೂ ಸಾಧನೆ ನಿರೀಕ್ಷಿತ ಮಟ್ಟಕ್ಕೆ ಆಗುತ್ತಿಲ್ಲ. ಮಕ್ಕಳೇ, ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ದೇಶದ ಜನಸಂಖ್ಯೆಗೆ ತಕ್ಕ ಸಾಧನೆ ತೋರಿಸಿ” ಎಂದು ಕರೆ ನೀಡಿದರು.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಕಾರ್ಯಕ್ರಮಕ್ಕೆ ಕಳುಹಿಸಿದ ಶುಭಸಂದೇಶದಲ್ಲಿ, “ಕ್ರೀಡೆ ನನ್ನ ಬದುಕಿಗೆ ಪ್ರಭಾವ ಬೀರಿದೆ. ಗೆಲುವು–ಸೋಲುಗಳನ್ನೂ ಸಮಚಿತ್ತದಿಂದ ಸ್ವೀಕರಿಸಲು ಕ್ರೀಡಾಸ್ಪೂರ್ತಿ ಕಾರಣ. ಈ ಸಂಸ್ಕಾರ ಶ್ರೀಮಠದಿಂದ ಬಂದಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, “ಹಾಸನದಲ್ಲಿ ಮತ್ತೆ ಕ್ರೀಡಾಕೂಟ ನಡೆಯುತ್ತಿರುವುದು ನನ್ನ ಸೌಭಾಗ್ಯ. ಶ್ರೀಮಠದ ಸೇವೆಗೆ ನಾನು ಸದಾ ಸಿದ್ದ” ಎಂದರು. ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, “ಸರ್ಕಾರಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಶ್ರೀಮಠ ಕ್ರೀಡಾಕೂಟ ಆಯೋಜಿಸುವುದು ಶ್ಲಾಘನೀಯ. ಶಿಕ್ಷಣ, ಆರೋಗ್ಯ ಹಾಗೂ ಕ್ರೀಡೆಗೆ ಒತ್ತು ನೀಡುತ್ತಿರುವುದು ಸಮಾಜಕ್ಕಾಗಿ ಮಹತ್ತರ ಸೇವೆ” ಎಂದು ಹೇಳಿದರು.
ಈ ಮೊದಲು ಪ್ರಾಸ್ತಾವಿಕ ಭಾಷಣ ಮಾಡಿದ ಶ್ರೀ ಶಂಭುನಾಥ ಸ್ವಾಮೀಜಿ, “ಶೈಕ್ಷಣಿಕ–ಸಾಂಸ್ಕೃತಿಕ–ಆಧ್ಯಾತ್ಮಿಕ ಉತ್ತೇಜನ ಜೊತೆಗೆ ಪ್ರತಿ ವರ್ಷ ಕ್ರೀಡಾಕೂಟ ಆಯೋಜನೆ ಮೂಲಕ ಮಕ್ಕಳೆಲ್ಲ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬುದು ಶ್ರೀಮಠದ ಉದ್ದೇಶ. ಈಗ ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳು ದೇಶೀಯ–ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸ್ವಾಮೀಜಿ ಕಂಡ ಕನಸಿನ ನೈಜ ರೂಪ” ಎಂದರು.
ಸಾಧನೆ ಮಾಡಿದ ಮಹಿಳಾ ಕ್ರೀಡಾಪಟುಗಳು ತಂದ ಕ್ರೀಡಾಜ್ಯೋತಿಯನ್ನು ಅಂತಾರಾಷ್ಟ್ರೀಯ ಆಟಗಾರರಾದ ಪೂನಂ ಬೆಳ್ಳಿಯಪ್ಪ ಮತ್ತು ಹರ್ಷಿತ್ ಇಂಚರಾ ಸ್ವೀಕರಿಸಿದರು. ನಂತರ ಕ್ರೀಡಾ ಪ್ರತಿಜ್ಞೆ ಬೋಧಿಸಲಾಯಿತು. ಶಾಸಕರು ಸ್ವರೂಪ್ ಪ್ರಕಾಶ್ ಮತ್ತು ಬಾಲಕೃಷ್ಣ ಸೇರಿದಂತೆ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜಿಎಸ್ ಕ್ರೀಡಾ ಸಂಭ್ರಮ ಪುಸ್ತಕ ಬಿಡುಗಡೆಗೊಂಡಿತು. ವಿವಿಧ ಜಿಲ್ಲೆಗಳು ಮತ್ತು ಮಠಗಳಿಂದ ಬಂದ ಶ್ರೀಮಠಾಧೀಶರು, ಟ್ರಸ್ಟಿಗಳು, ಜಿಲ್ಲಾ ಒಕ್ಕಲಿಗರ ಸಂಘ, ಕಸಾಪ ಹಾಗೂ ಸ್ಥಳೀಯ ಮುಖಂಡರು ಭಾಗಿಯಾಗಿದರು.
