ತುಮಕೂರು: ಲಾರಿ ಚಾಲಕರು ಅತಿ ವೇಗವಾಗಿ ವಾಹನ ಚಲಾಯಿಸಬೇಡಿ, ಅವಸರದ ಚಾಲನೆಯಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚು. ವಾಹನವನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಚಾಲನೆ ಮಾಡಿ, 10-20 ನಿಮಿಷ ಬೇಗ ಸೇರುವುದಕ್ಕಾಗಿ ಹತೋಟಿ ಮೀರಿ ವಾಹನ ಚಾಲನೆ ಮಾಡದೆ ಸ್ವಲ್ಪ ತಡವಾದರೂ ಸುರಕ್ಷಿತ ಚಾಲನೆ ಮುಖ್ಯ ಎಂದು ಮಾಜಿ ಶಾಸಕ ಡಾ. ಎಸ್.ರಫೀಕ್ ಅಹ್ಮದ್ ಹೇಳಿದರು.
ಗುರುವಾರ ನಗರದ ಸಂತೆಪೇಟೆಯ ಜಿಲ್ಲಾ ಲಾರಿ ಚಾಲಕರು ಮತ್ತು ಸಹಾಯಕರ ಸಂಘಕ್ಕೆ ತಮ್ಮ ತಂದೆ, ಎಸ್.ಎಂ.ಇಸ್ಮಾಯಿಲ್ ಅವರ ಸ್ಮರಣಾರ್ಥ ತಾವು ಕೊಡುಗೆ ನೀಡಿದ ಆಂಬ್ಯುಲೆನ್ಸ್ ಹಸ್ತಾಂತರ ಮಾಡಿ ಮಾತನಾಡಿದರು.
ಲಾರಿ ಚಾಲಕರು ಸರಕು-ಸಾಮಗ್ರಿ ತುಂಬಿಕೊಂಡು ಹೊರ ಜಿಲ್ಲೆಗಳಿಗೂ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಅಪಘಾತವಾದರೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಆಂಬ್ಯುಲೆನ್ಸ್ ಸಹಾಯಕ್ಕೆ ಬರುತ್ತದೆ. ಅಪಘಾತ, ಅವಘಡದ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಜೀವ ಉಳಿಸುವ ವಾಹನವಾಗಿದೆ. ಲಾರಿ ಚಾಲಕರು ಮತ್ತು ಸಹಾಯಕರ ಪ್ರಯಾಣ ಸುಖಕರವಾಗಿರಲಿ, ಅಚಾತುರ್ಯದಿಂದ ಸಂಭವಿಸುವ ಅಪಘಾತಗಳಿಗೆ ಆಂಬ್ಯುಲೆನ್ಸ್ ನೆರವಿಗೆ ಬರುತ್ತದೆ ಎಂದರು.
ಮಾಜಿ ಶಾಸಕರಾದ ಎಸ್.ಷಫಿಅಹ್ಮದ್ ಹಾಗೂ ತಮ್ಮ ತಂದೆ ಇಬ್ಬರಲ್ಲೂ ಸಾಮ್ಯತೆ ಇದೆ. ಇಬ್ಬರೂ ಶಿಕ್ಷಣಕ್ಕೆ ಶಕ್ತಿ ಕೊಟ್ಟವರು. ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬದುಕು ಕೊಟ್ಟವರು.
ಪ್ರಪಂಚದ ವಿವಿಧೆಡೆ ತಮ್ಮನ್ನು ಭೇಟಿಯಾಗುವವರು, ಸಾರ್, ನಾನು ನಿಮ್ಮ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದು ಎಂದು ಹೇಳುವಾಗ ಹೆಮ್ಮೆ ಎನಿಸುತ್ತದೆ. ಶಿಕ್ಷಣಕ್ಕೆ ಅಂತಹ ಶಕ್ತಿ, ಸಂಬAಧವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ತಮ್ಮ ತಂದೆ ಎಸ್.ಎಂ.ಇಸ್ಮಾಯಿಲ್ ಅವರ ಆಶಯವಾಗಿತ್ತು. ಅವರ ಮಕ್ಕಳಾದ ನಾವೂ ಉನ್ನತ ಶಿಕ್ಷಣ ಪಡೆಯಲು ಮಾರ್ಗದರ್ಶನ ಮಾಡಿದರು. ಶಿಕ್ಷಣದ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರು ಎಂದು ಡಾ. ರಫೀಕ್ ಅಹ್ಮದ್ ತಂದೆ ನೆನೆದು ಅಭಿಮಾನಪಟ್ಟರು.
ಮಾಜಿ ಶಾಸಕ ಎಸ್.ಷಫಿ ಅಹ್ಮದ್ ಅವರು ಮಾತನಾಡಿ, ಲಾರಿ ಚಾಲಕರು ಮತ್ತು ಸಹಾಯಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಲು ಸಂಘದ ಪರ್ದಾಧಿಕಾರಿಗಳು ನೆರವಾಗಬೇಕು. ಚಾಲಕರಿಗೆ ವಿಮಾ ಸೌಲಭ್ಯ ಒದಗಿಸಲು ಸಹಾಯ ಮಾಡಿದ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆವಹಿಸಿದ್ದರು. ಮೆಹಬೂಬ್ ಪಾಷಾ ಟಿ.ಎಸ್.ತರುಣೇಶ್, ಇನಾಯತ್ ಉಲ್ಲಾಖಾನ್, ನದೀಂ ಪಾಷಾ, ಮುಖಂಡರಾದ ಅಕ್ರಮ್ ಉಲ್ಲಾಖಾನ್, ಕೆ.ನಯಾಜ್ ಅಹ್ಮದ್, ಅಫ್ತಾಬ್ ಅಹ್ಮದ್, ಜಿಯಾ ಉಲ್ಲಾ, ಸೈಫತ್ತುಲ್ಲಾ, ಅತೀಕ್ ಅಹ್ಮದ್, ಆಟೋ ರಾಜು, ಮುಕ್ತೀಯಾರ್ ಅಹ್ಮದ್, ಬಾಬು, ಜಾಕೀರ್ ಪಾಷಾ, ಚಾಂದ್ ಪಾಷಾ, ಅದೀಬ್ ಅಹ್ಮದ್, ಮಹ್ಮದ್ ಜಾಹಿದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
-ಕೆ.ಬಿ.ಚಂದ್ರಚೂಡ
