ಟಿ.ನರಸೀಪುರ: ತಲಕಾಡು ಹೋಬಳಿ ಸಮೀಪದ ಕಾಳೀಹುಂಡಿ ಗ್ರಾಮದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಶಾಂತಿ, ಕುಟುಂಬ ಕಲಹ ಹಾಗೂ ಸಾಮಾಜಿಕ ಅವ್ಯವಸ್ಥೆಗೆ ಕಾರಣವಾಗಿದ್ದು,ಈ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು, ಮಹಿಳಾ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ನಿರ್ಣಯಕೈಗೊಂಡು,ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲು ಆಗ್ರಹಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗ್ರಾಮಸ್ಥರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಳೆಸಾಲು ಗ್ರಾ.ಪಂ. ಮಾಜಿ ಸದಸ್ಯ ಮಹೇಂದ್ರ ರವರು ಮಾತನಾಡಿ, ಗ್ರಾಮದ ಎಲ್ಲಾ ವರ್ಗದ ಜನರು ಅಕ್ರಮ ಮದ್ಯ ಮಾರಾಟದ ವಿರುದ್ಧ ತಿರುಗಿ ಬಿದ್ದಿದ್ದಾರೆ, ಗ್ರಾಮಸ್ಥರ ಆಕ್ರೋಶ ಸ್ಪೋಟಗೊಳ್ಳುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಮದ್ಯ ಮಾರಾಟವನ್ನು ನಿರ್ದಾಕ್ಷಿಣ್ಯವಾಗಿ ನಿಗ್ರಹಿಸಲು ಆಗ್ರಹಿಸಿದರು.
ಯಜಮಾನ ಮಲ್ಲೇಶ್ ಮಾತನಾಡಿ, ಗ್ರಾಮದಲ್ಲಿನ ಅನಧಿಕೃತ ಮದ್ಯ ಮಾರಾಟದಿಂದ ಕೂಲಿ ಕಾರ್ಮಿಕರು ದೈನಂದಿನ ಸಂಪಾದನೆಯನ್ನು ಕುಡಿತಕ್ಕೆ ವ್ಯಯ ಮಾಡುತ್ತಿದ್ದು, ಇದರಿಂದ ಮಹಿಳೆಯರು ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಕುಡಿತದ ಚಟದಿಂದ ಮನೆಗಳಲ್ಲಿ ನಿತ್ಯ ಜಗಳ ಕಲಹ ಉಪವಾಸದಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಬಹುತೇಕ ಗ್ರಾಮದ ಬಡವರು ಕಡಿತಕ್ಕೆ ದಾಸರಾಗಿ ಸಾಲದ ಸುಳಿಗೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ದಿನವಿಡೀ 24ಗಂಟೆಗಳ ಕಾಲ ಅಕ್ರಮ ಮದ್ಯ ಮಾರಾಟ ರಾಜಾ ರೋಷವಾಗಿ ನಡೆಯುತ್ತಿದೆ. ಮನೆಗಳಲ್ಲಿ, ಜಗಳ ಗಲಾಟೆಗಳು ಹೆಚ್ಚಾಗಿವೆ. ತಕ್ಷಣ ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಸಮಾಜವೇ ಕುಸಿಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಯಜಮಾನ್ ಕೃಷ್ಣ ಕಳವಳ ವ್ಯಕ್ತಪಡಿಸಿ,ಮತ್ತೋರ್ವ ಯಜಮಾನ ಗಂಗಾಧರ ಮಾತನಾಡಿ ಕುಡಿತದ ದಾಸರಾಗಿ ಬಹುತೇಕರು ಸಾಲದ ಬಲೆಗೆ ಸಿಲುಕಿ ಗ್ರಾಮ ತೊರೆಯುವ ಕೆಟ್ಟ ಪರಿಸ್ಥಿತಿ ಎದುರಿ ಸುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.
ಗ್ರಾಮಸ್ಥರ ಸಾಮೂಹಿಕ ನಿರ್ಣಯ
ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಸಲುವಾಗಿ ಯಾವುದೇ ವ್ಯಕ್ತಿ ಗ್ರಾಮದಲ್ಲಿ ಮದ್ಯ ಮಾರಾಟ ನಡೆಸಿದರೆ, ಅಬಕಾರಿ ಮತ್ತು ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಜರುಗಿಸಲು ಗ್ರಾಮಸ್ಥರು ಸಾಮೂಹಿಕ ನಿರ್ಣಯ ಕೈಗೊಂಡಿರುವ ಬಗ್ಗೆ ಗ್ರಾಮಸ್ಥರು ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜಣ್ಣ,ಮಲ್ಲೇಶ್, ಬಸವರಾಜು, ಕೆ.ಬಿ. ಕೃಷ್ಣ, ಕೆ. ಎಂ.ಹರೀಶ್, ರಾಮೇಗೌಡ, ಪಿ. ಮಂಜುನಾಥ್, ಕೆ.ಬಿ. ಶಿವನಂಜೇಗೌಡ, ಕೆಎಸ್ ಗಂಗಾಧರ ಸುನಿಲ್ ವೆಂಕಟಸ್ವಾಮಿ ಬದ್ರಿ ಮಹೇಶ್,ಹುಚೀರ ಮಹೇಶ್, ಮೊಟ್ಟೆ ಬಸವರಾಜು, ಕೆ.ಎಂ.ಮೋಹನ,, ಆರ್.ಶಿವಣ್ಣ,ನಾಗರಾಜು, ಬಸವರಾಜು, ರಾಮಪ್ರಸಾದ್, ನಾಗರಾಜು, ಭೋಯ್ಯನ ನಾಗರಾಜ,ಕೆಂಪಶೆಟ್ಟಿ, ಜಗದೀಶ್,ಮಾದಬಸವ ಶೆಟ್ಟಿ, ಬಸವರಾಜ ಶೆಟ್ಟಿ,ಸಿದ್ದರಾಜು, ಗಣೇಶನ್,ಶಿವಲಿಂಗ, ಮಹೇಂದ್ರ, ಚಿಕ್ಕಬಸವ ನಾಯಕ,ಎಂ.ಎಸ್. ಬಸವರಾಜು, ಎಂ. ಶಿವಣ್ಣ, ಶಂಕರ್ ಪ್ರಸಾದ್ ಹಾಜರಿದ್ದರು.
ವರದಿ : ಎಂ ನಾಗೇಂದ್ರ ಕುಮಾರ್
