ಚನ್ನರಾಯಪಟ್ಟಣ: ಪಟ್ಟಣದ ಗೂರನಹಳ್ಳಿ ಬಡಾವಣೆಯಲ್ಲಿರುವ ತಾಲೂಕು ಆಟೋ ಮಾಲೀಕರು ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಮಾತನಾಡಿ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಆಚರಿಸುವವರು ಆಟೋ ಚಾಲಕರು ಮಾತ್ರ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಆಟೋ ಚಾಲಕರ ಪಾತ್ರ ಮಹತ್ವದ್ದಾಗಿದೆ. ಕನ್ನಡ ನಾಡು, ನುಡಿ, ಗಡಿ ಹಾಗೂ ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುವವರು ಆಟೋ ಚಾಲಕರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಆಟೋ ಚಾಲಕರಿಗೆ ಉಚಿತವಾಗಿ ವಿಮೆ ಮಾಡಿಸಿಕೊಡುವ ಭರವಸೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ಅನುಕೂಲವಾಗುವಂತಹ ವಿವಿಧ ಸೇವೆಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮುರಾರ್ಜಿ ಮಂಜಣ್ಣ ಮಾತನಾಡಿ, ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಆಟೋ ಚಾಲಕರು ತೊಡಗಿಸಿಕೊಂಡಿದ್ದಾರೆ. ಯಾವುದೇ ಭಾಷೆಯ ವ್ಯಕ್ತಿಗಳು ಬಂದರೂ ಪ್ರೀತಿಯಿಂದ ತಮ್ಮ ಗಮ್ಯಸ್ಥಾನಕ್ಕೆ ತಲುಪಿಸುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿರಿಯ ಆಟೋ ಚಾಲಕರಾದ ಮಂಟಿ ಸಲೀಂ, ಮಂಜಣ್ಣ, ದಿಂಡಗೂರು ಬಸವರಾಜು, ರಂಗಣ್ಣ, ಅಲ್ಲಾ ಬಾಕ್ಸಿಷ್, ಸಾಜಿತ್ ಪಾಷಾ ಹಾಗೂ ಜಂಬೂರು ರಂಗಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್, ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಮುರಾರ್ಜಿ ಮಂಜಣ್ಣ, ದುಬೈ ಮಂಜು, ಅಬ್ದುಲ್ ಹಕ್, ಸಂಘದ ಗೌರವಾಧ್ಯಕ್ಷ ಪರಶುರಾಮ್, ಅಧ್ಯಕ್ಷ ಪರ್ವೀಜ್ ಪಾಷಾ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕಿಶೋರ್ ಕುಮಾರ್, ಖಜಾಂಚಿ ಶಶಾಂಕ್, ನಿರ್ದೇಶಕರಾದ ಚಂದ್ರೇಗೌಡ, ರಸೂಲ್, ಸಾಜಿದ್ ಪಾಷಾ, ಅನಿಲ್ ಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
