Bhagavad Gita
ಶ್ಲೋಕ – 26
ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ ।
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ ॥೨೬॥
ವೇದ ಅಹಮ್ ಸಮತೀತಾನಿ ವರ್ತಮಾನಾನಿ ಚ ಅರ್ಜುನ ।
ಭವಿಷ್ಯಾಣಿ ಚ ಭೂತಾನಿ ಮಾಮ್ ತು ವೇದ ನ ಕಶ್ಚನ-
ಅರ್ಜುನ , ನಾನು ತಿಳಿದಿದ್ದೇನೆ-
ಹಿಂದಿದ್ದ ಜೀವಿಗಳನ್ನು, ಈಗಿರುವವರನ್ನು,ಮುಂದೆ ಬರುವವರನ್ನು ಕೂಡ. ನನ್ನನ್ನು ಮಾತ್ರ ಯಾರೂ ತಿಳಿದಿಲ್ಲ.
ಜೀವ ಮತ್ತು ಭಗವಂತನ ನಡುವಿನ ವೆತ್ಯಾಸವನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ “ ಹಿಂದೆ ಆಗಿ ಹೋದ ಭೂತಗಳು,
ಈಗ ಇರುವ ಭೂತಗಳು, ಮತ್ತು ಮುಂದೆ ಬರಲಿರುವ ಭೂತಗಳು ಈ ಎಲ್ಲವನ್ನೂ ನಾನು ತಿಳಿದಿದಿದ್ದೇನೆ” ಎಂದು. ಇಲ್ಲಿ ಭೂತ ಎನ್ನುವ ಪದಕ್ಕೆ ಅನೇಕ ಅರ್ಥವಿದೆ.
ಪಂಚಭೂತಗಳು, ಅದರಿಂದ ನಿರ್ಮಾಣವಾದ ಬ್ರಹ್ಮಾಂಡ, ಅದರಿಂದ ರೂಪುಗೊಂಡ ಸಮಸ್ತ ವಸ್ತುಗಳು ಮತ್ತು ಸಮಸ್ತ ಜೀವಜಾತಗಳು ಎಲ್ಲವೂ ಭೂತಗಳು.
ಈ ಹಿಂದೆ ಸೃಷ್ಟಿಯಾದ ಅನಂತ ಬ್ರಹ್ಮಾಂಡ, ಈಗಿರುವ ಬ್ರಹ್ಮಾಂಡ, ಮುಂದೆ ಸೃಷ್ಟಿಯಾಗಲಿರುವ ಅನಂತ ಬ್ರಹ್ಮಾಂಡ, ಹಿಂದೆ ಇದ್ದ ಅನಂತ ಜೀವಜಾತಗಳು,
ಈಗಿರುವ ಅನಂತ ಜೀವಜಾತಗಳು ಮತ್ತು ಮುಂದೆ ಸೃಷ್ಟಿಯಾಗಲಿರುವ ಅನಂತ ಜೀವಜಾತಗಳನ್ನು ತಿಳಿದವನು ಆ ಅನಂತಕೋಟಿ ಬ್ರಹ್ಮಾಂಡ ನಾಯಕ ಭಗವಂತನೊಬ್ಬನೆ.
ಕೃಷ್ಣ ಹೇಳುತ್ತಾನೆ “ಮಾಮ್ ತು ವೇದ ನ ಕಶ್ಚನ” ಎಂದು.
ಅಂದರೆ ‘ನನ್ನನ್ನು ಬಿಟ್ಟು ಇನ್ನ್ಯಾರೂ ಇದನ್ನು ಪೂರ್ಣವಾಗಿ ತಿಳಿದಿಲ್ಲ’ .
ಭಗವಂತನನ್ನು ಪೂರ್ಣವಾಗಿ ತಿಳಿದವರಿಲ್ಲ ಹಾಗು ತಿಳಿಯುವುದು ಸಾಧ್ಯವಿಲ್ಲ.
ಆತ ಸ್ವತಂತ್ರ, ಪೂರ್ಣ ಮತ್ತು ನಿತ್ಯ ಸತ್ಯ.
ಜೀವ ಅಪೂರ್ಣ, ಅಸ್ವತಂತ್ರ ಮತ್ತು ಅನಿತ್ಯಸತ್ಯ.
