ತುಮಕೂರು: ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕದ ವಿರುದ್ಧ ಜಿಲ್ಲಾ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ, ವಿಧೇಯಕನ್ನು ಜಾರಿಗೊಳಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಹೊರಟಿರುವ ದ್ವೇಷ ಪ್ರತಿಬಂಧಕ ವಿಧೇಯಕವು ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ವಿಧೇಯಕವನ್ನು ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆಗ್ರಹಪತ್ರ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್ಗೌಡರು, ನಾಗರೀಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ, ವಾಕ್ ಸ್ವಾತಂತ್ರ ದಮನ ಮಾಡುವ ದ್ವೇಷ ಪ್ರತಿಬಂಧಕ ವಿಧೇಯಕದ ವಿರುದ್ಧ ಬಿಜೆಪಿ ಬೆಳಗಾವಿ ಅಧಿವೇಶನದಲ್ಲೇ ವಿರೋಧಿಸಿ ಪ್ರತಿಭಟನೆ ನಡೆಸಿತ್ತು. ಬಿಜೆಪಿಯ ವಿರೋಧದ ನಡುವೆಯೇ ಕಾಂಗ್ರೆಸ್ ಸರ್ಕಾರ ಈ ಬಿಲ್ ಪಾಸ್ ಮಾಡಿದೆ. ಇದರ ಅನುಷ್ಠಾನಕ್ಕೆ ಬಿಜೆಪಿ ಬಿಡುವುದಿಲ್ಲ, ಉಗ್ರ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ದ್ವೇಷ ಪ್ರತಿಬಂಧಕ ವಿಧೇಯಕವು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಹಾನಿ ಮಾತ್ರವಲ್ಲದೆ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನಿಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಿಗಳಿಗೆ ಜಾಮೀನು ಇಲ್ಲ. ಜನ ಸಾಮಾನ್ಯರನ್ನು ಅಪರಾಧಿಗಳನ್ನಾಗಿ ಮಾಡುವ ಈ ಕೀಳು ಮಟ್ಟದ ಕಾಯ್ದೆ ನಮಗೆ ಬೇಕೆ ಎಂದ ಪ್ರಶ್ನೆ ಮೂಡುತ್ತದೆ ಎಂದರು.
ಪೊಲೀಸರು ಅಥವಾ ಅಧಿಕಾರಿಗಳು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ತೆಗೆದುಕೊಳ್ಳಬಹುದು. ಇದರಿಂದ ಪ್ರತಿಭಟನೆಗಳು, ಸಭೆಗಳು ಅಥವಾ ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶ ಇದ್ದಂತಿದೆ. ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಸುವವರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಅಥವಾ ಜನರ ಧ್ವನಿಯನ್ನು ನಾಶ ಮಾಡುವ ಇಂತಹ ಕಾಯಿದೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದು ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದರು.
ಜಿ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಮುಖಂಡರಾದ ಸತ್ಯಮಂಗಲ ಜಗದೀಶ್, ಜೆ.ಜಗದೀಶ್, ಮರಿತಿಮ್ಮಯ್ಯ,ಶ್ರೀಮತಿ ಕೋಮಲವೀರಭದ್ರಯ್ಯ,ಶಬ್ಬೀರ್ ಅಹಮದ್,ರಾಮಚಂದ್ರರಾವ್(ಚಂದ್ರು),ರಾಮಣ್ಣ,ರೇಖಾಕುಮಾರ್,ಸಿದ್ದರಾಜು(ಕ್ಯಾತ್ಸಂದ್ರ) ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
