ಚಿಕ್ಕಮಗಳೂರು, ಡಿ.24: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿಬಿದ್ದ ಪರಿಣಾಮ ಎಂಇಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೈದು ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ರಸ್ತೆ ಅಪಘಾತ ಚಿಕ್ಕಮಗಳೂರು ಹೊರವಲಯದ ಮೂಗ್ತಿಹಳ್ಳಿ ಬಳಿ ನಡೆದಿದೆ.
ಮೂಡಿಗೆರೆಯಿಂದ ಚಿಕ್ಕಮಗಳೂರಿನತ್ತ ಬರುತ್ತಿದ್ದ ಕಾರು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಗ್ತಿಹಳ್ಳಿ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ರಸ್ತೆ ಬದಿಗೆ ಜಾರಿ ಗದ್ದೆಗೆ ಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರೊಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದುಕೊಳ್ಳಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.
ಅಪಘಾತದಲ್ಲಿ ಮೊಹೀನ್ (19) ಎಂಬ ಎಂಇಎಸ್ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಕಾರಿನಲ್ಲಿದ್ದ ರಿಹಾನ್, ಸತ್ಯಪಾಲ್, ಪೂರ್ಣ, ಶ್ರೇಯಸ್ ಹಾಗೂ ರಘು ಎಂಬ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೊದಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ಮತ್ತು ಗಾಯಾಳುಗಳು ಎಲ್ಲರೂ ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಮೂಡಿಗೆರೆಗೆ ತೆರಳಿದ್ದರು. ಕ್ರಿಕೆಟ್ ಮ್ಯಾಚ್ ಮುಗಿಸಿಕೊಂಡು ಮರಳಿ ಚಿಕ್ಕಮಗಳೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಯುವಕರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳಾಗಿರುವುದರಿಂದ ಈ ಅಪಘಾತ ಕಾಲೇಜು ವಲಯದಲ್ಲಿ ತೀವ್ರ ದುಃಖ ಹಾಗೂ ಆಘಾತ ಮೂಡಿಸಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತ ಸಂಭವಿಸಿದ ಸ್ಥಳದಲ್ಲಿ ವಾಹನದ ವೇಗ, ರಸ್ತೆ ತಿರುವು ಹಾಗೂ ಚಾಲಕನ ಅಜಾಗರೂಕತೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇತ್ತ, ಯುವ ವಿದ್ಯಾರ್ಥಿಯ ಅಕಾಲಿಕ ಸಾವಿಗೆ ಸ್ಥಳೀಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದು, ರಸ್ತೆ ಸುರಕ್ಷತೆ ಹಾಗೂ ಯುವಕರು ವಾಹನ ಚಲಾಯಿಸುವ ವೇಳೆ ಹೆಚ್ಚಿನ ಜಾಗರೂಕತೆ ವಹಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
