ಹಾಸನ ಡಿ.24:ಅಪ್ರಾಪ್ತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಪ್ರೇಮದ ಬಲೆಗೆ ಬೀಳಿಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಹೆಣ್ಣು ಮಗುವಿಗೆ ಜನನ ನೀಡಿರುವ ಅಘಾತಕಾರಿ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ, ಅದೇ ಶಾಲೆಯ ವಾಹನ ಚಾಲಕನಾಗಿದ್ದ ಅಂಜಿತ್ ಎಂಬಾತ ಕಳೆದ ಎಂಟು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿ ಬಾಲಕಿಯನ್ನು ಭಾವನಾತ್ಮಕವಾಗಿ ಮರುಳುಗೊಳಿಸಿ, ಪ್ರೇಮದ ನೆಪದಲ್ಲಿ ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರ ಪರಿಣಾಮವಾಗಿ ಬಾಲಕಿ ಇತ್ತೀಚೆಗೆ ಹೆಣ್ಣು ಮಗುವಿಗೆ ಜನನ ನೀಡಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಾಲಕಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಹಾಗೂ ಆರೈಕೆ ನೀಡಲಾಗುತ್ತಿದೆ. ಕೆಲ ದಿನಗಳ ಆಸ್ಪತ್ರೆಯ ಆರೈಕೆಯ ನಂತರ, ಬಾಲಕಿ ಹಾಗೂ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಆಸ್ಪತ್ರೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಶಶಿಧರ ಎಸ್. ಕೋಸಂಬೆ ಅವರು ಸಂತ್ರಸ್ತ ಬಾಲಕಿ ಹಾಗೂ ಮಗುವಿನ ಯೋಗಕ್ಷೇಮ ವಿಚಾರಿಸಿ, ವೈದ್ಯರು ಮತ್ತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಕಲೆಹಾಕಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇದು ಅತ್ಯಂತ ಅಹಿತಕರ ಮತ್ತು ಗಂಭೀರ ಘಟನೆ. ಮಕ್ಕಳ ರಕ್ಷಣೆಯ ಹೊಣೆ ಹೊತ್ತಿರುವ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ನಿರ್ಲಕ್ಷ್ಯ ಕಂಡುಬಂದಿರುವುದು ವಿಷಾದಕರ,” ಎಂದು ಹೇಳಿದರು.
ಅವರು ಮುಂದುವರೆದು, ಸಂಬಂಧಿಸಿದ ಖಾಸಗಿ ಶಾಲೆಯ ಮಾನ್ಯತೆ ಹಾಗೂ ನವೀಕರಣ ದಾಖಲೆಗಳನ್ನು ಪರಿಶೀಲಿಸಲಾಗಿದೆ. 2016ರ ಮಕ್ಕಳ ರಕ್ಷಣಾ ನೀತಿ (Child Protection Policy)ಯನ್ನು ಶಾಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವುದು ಕಂಡುಬಂದಿದೆ. ಶಾಲೆಯ ವಾಹನಗಳಲ್ಲಿ ಯಾವುದೇ ಸುರಕ್ಷತಾ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ ಎಂಬುದೂ ಬೆಳಕಿಗೆ ಬಂದಿದೆ. ಇದರಿಂದ ಶಾಲೆಯ ಆಡಳಿತ ಮಂಡಳಿಯ ಗಂಭೀರ ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಆರೋಪಿಯಾಗಿರುವ ವಾಹನ ಚಾಲಕನನ್ನು ತಕ್ಷಣವೇ ಬಂಧಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿರುವುದಾಗಿ ಶ್ರೀ ಶಶಿಧರ ಎಸ್. ಕೋಸಂಬೆ ತಿಳಿಸಿದರು. ಸಂತ್ರಸ್ತ ಬಾಲಕಿಗೆ ಕಾನೂನುಬದ್ಧ ನ್ಯಾಯ, ಮಾನಸಿಕ ಬೆಂಬಲ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಘಟನೆಯ ಕುರಿತು ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣವು ಶಾಲಾ ಮಕ್ಕಳ ಸುರಕ್ಷತೆ, ಶಾಲಾ ವಾಹನಗಳ ಮೇಲ್ವಿಚಾರಣೆ ಮತ್ತು ಮಕ್ಕಳ ರಕ್ಷಣಾ ನೀತಿಗಳ ಕಟ್ಟುನಿಟ್ಟಾದ ಅನುಷ್ಠಾನದ ಅಗತ್ಯತೆಯನ್ನು ಮತ್ತೆ ತೀವ್ರವಾಗಿ ನೆನಪಿಸಿದೆ.
