ಹಾಸನ: ಹೊಸ ವರ್ಷ ಬರುತ್ತಿದ್ದು, ಹಳೆಯ ನೆನಪುಗಳು ಹಾಗೂ ಕೆಟ್ಟ ಘಳಿಗೆಗಳನ್ನು ಮರೆತು, ಹೊಸ ಅನುಭವಗಳೊಂದಿಗೆ ಹೊಸ ಜೀವನ ಆರಂಭಿಸೋಣ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಸಂಘದ ಡಿ.ವಿ.ಜಿ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊಸ ಕ್ಯಾಲೆಂಡರ್ ಬಿಡುಗಡೆ ಹಾಗೂ ಏಳು ತಾಲೂಕುಗಳ ನೂತನ ಅಧ್ಯಕ್ಷರು–ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಮ್ಮ ಅನುಭವಗಳನ್ನು ನೆನಪಿಸಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ಕೃತಜ್ಞರಾಗೋಣ. ಮುಂದೆ ಹೊಸತನ, ಹೊಸ ಗುರಿ ಹಾಗೂ ಉತ್ಸಾಹದೊಂದಿಗೆ ಮುನ್ನಡೆಯಬೇಕು” ಎಂದು ಹೇಳಿದರು.
ತಾನು ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿರುವುದನ್ನು ಸ್ಮರಿಸಿದ ಅವರು, ಆರಂಭದಲ್ಲಿ ಪತ್ರಕರ್ತರು ನೀಡಿದ ಆತ್ಮೀಯ ಸ್ವಾಗತ ಅವಿಸ್ಮರಣೀಯ. ಹಾಸನಾಂಬೆ ಉತ್ಸವ ಯಶಸ್ವಿಯಾಗಿ ಹೊಸ ದಾಖಲೆ ಸೃಷ್ಟಿಸಿತು. ಜಿಲ್ಲೆಗೆ ಎರಡು ಬಾರಿ ಮುಖ್ಯಮಂತ್ರಿ ಭೇಟಿ ನೀಡಿದ್ದು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದರು.
ಮೊಸಳೆ ಹೊಸಳ್ಳಿ ದುರಂತವನ್ನು ನೆನಪಿಸಿಕೊಂಡು, “ಜೀವನದ ಏರಿಳಿತಗಳನ್ನು ಎದುರಿಸಿ ಸರಿಯಾದ ದಾರಿಯಲ್ಲಿ ಸಾಗುವುದೇ ಬದುಕು” ಎಂದು ಅಭಿಪ್ರಾಯಪಟ್ಟರು. ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆ ಸಲ್ಲಿಸಿ, ಸೋತವರು ಬೇಸರಪಡದೆ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದರು.
ಜಿಲ್ಲೆಯಲ್ಲಿ ಮಾದಕ ವ್ಯಸನ ತೀವ್ರವಾಗಿದ್ದು, ಬಾಲ ಗರ್ಭಿಣಿಯರ ಪ್ರಕರಣಗಳು ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವಿಶ್ವಮಾನವ ಸಂದೇಶವನ್ನು ಸ್ಮರಿಸಿದರು. “ಓ ನನ್ನ ಚೇತನ”, “ಬಾರಿಸು ಕನ್ನಡ ಡಿಂಡಿಮವ” ಎಂಬ ಕುವೆಂಪು ಕವಿತೆಗಳ ಮೂಲಕ ನಾಡಿಗೆ ನೀಡಿದ ಕೊಡುಗೆಗೆ ನಮನ ಸಲ್ಲಿಸೋಣ ಎಂದರು.
ಕೆ.ಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಹೆಚ್.ಬಿ. ಮದನಗೌಡ ಮಾತನಾಡಿ, ಡಿಸಿ ಲತಾಕುಮಾರಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. “ಉತ್ತಮ ಕೆಲಸಗಳು ಉಳಿಯುತ್ತವೆ, ಟೀಕೆಗಳು ಮಾಯವಾಗುತ್ತವೆ. ಇನ್ನೂ ಉತ್ತಮವಾಗಿ ಕೆಲಸ ಮಾಡಿ, ನಮ್ಮೆಲ್ಲರ ಬೆಂಬಲ ಸದಾ ಇರುತ್ತದೆ” ಎಂದು ಹೇಳಿದರು. ಸಂಘಟನೆ ವಿಚಾರದಲ್ಲಿ ಏಕತೆಯ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘಗಳನ್ನು ಸದೃಢಗೊಳಿಸಲು ಯೋಜನೆ ಇದೆ. ಸಂಘದಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದ್ದು, ಅವರವರ ಕೆಲಸ-ಕಾರ್ಯಗಳನ್ನು ಅವರು ಮಾಡುತ್ತಿದ್ದಾರೆ ಎಂದರು. ಶೀಘ್ರವೇ ಜಿಲ್ಲಾ ಸಂಘದ ಕಟ್ಟಡ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಹಾಗೆಯೇ ಕೆಲವೇ ದಿನಗಳಲ್ಲಿ ಸಂಘದಲ್ಲೇ ಪತ್ರಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ರಿಕ್ರಿಯೇಷನ್ ಕ್ಲಬ್ ಚಿಂತನೆಯೂ ಇದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಹಿರಿಯ ಪತ್ರಕರ್ತರಾದ ಬಾಳ್ಳುಗೋಪಾಲ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಉಪಾಧ್ಯಕ್ಷ ಜಿ. ಪ್ರಕಾಶ್, ಕಾರ್ಯದರ್ಶಿಗಳಾದ ಬಿ.ಆರ್. ಬೊಮ್ಮೇಗೌಡ, ಕೆ.ಎಂ. ಹರೀಶ್, ಕುಶ್ವಂತ್, ಖಜಾಂಚಿ ಪ್ರಕಾಶ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು. ಚನ್ನರಾಯಪಟ್ಟಣದ ಹಿರಿಯ ಪತ್ರಕರ್ತ ನಾಗೇಶ್ ಪ್ರಾರ್ಥಿಸಿದರು. ಜನಮಿತ್ರ ವರದಿಗಾರ್ತಿ ಪುಷ್ಪಾ ಜಯರಾಂ ನಿರೂಪಣೆ ನಡೆಸಿದರು. ಕಾರ್ಯದರ್ಶಿ ಹರೀಶ್ ಕೆ.ಎಂ. ಸ್ವಾಗತಿಸಿದರು.
