ಬೆಂಗಳೂರು : ಕುವೆಂಪು ಅವರ ವೈಚಾರಿಕ ವೈಜ್ಞಾನಿಕ ಚಿಂತನೆಗಳ ಅಳವಡಿಕೆಯಿಂದ ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಾಹಿತಿ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ಅವರು ಅಭಿಪ್ರಾಯಪಟ್ಟರು. ಹೆಚ್. ಎ.ಎಲ್.ನ ರಾಷ್ಟ್ರಕವಿ ಕುವೆಂಪು ಸಂಘವು ಏರ್ಪಡಿಸಿದ್ದ ಮಹಾಕವಿ ಕುವೆಂಪು ಜಯಂತಿ ಸಮಾರಂಭವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.

ಶ್ರೀಸಾಮಾನ್ಯನೂ ಭಗವಂತನೆಡೆಗೆ ಹೋಗುವ ಮಾರ್ಗವನ್ನು ಕುವೆಂಪು ಅವರು ತಮ್ಮ ಎಲ್ಲಾ ಕಥೆ, ಕಾವ್ಯ,ಕಾದಂಬರಿ,ನಾಟಕ ವಿಮರ್ಶೆ, ಪ್ರಬಂಧಗಳಲ್ಲಿ ಹಿಡಿದಿಡುವ ಪ್ರಯತ್ನ ಮಹತ್ವದ್ದು ಎಂದರು. ರಾಜಕಾರಣದಲ್ಲಿ ನಡೆಯುವ ಭ್ರಷ್ಟತೆಯನ್ನು ಹೋಗಲಾಡಿಸಲು ಒಳ್ಳೆಯವರು, ವಿಶೇಷವಾಗಿ ಯುವಜನತೆ, ವಿದ್ಯಾವಂತರು ಬಾರದಿರುವುದೇ ಕಾರಣವಾಗಿದ್ದು ನಾಡಾಭಿಮಾನದ ಮೂಲಕ ರಾಷ್ಟ್ರಾಭಿಮಾನ ಮೂಡಿಸುವ ಕೆಲಸವನ್ನು ಕುವೆಂಪು ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ ಇಂತಹ ಹತ್ತಾರು ಕವಿತೆಗಳನ್ನು ಕನ್ನಡಕ್ಕೆ,ಕನ್ನಡಿಗರ ಒಗ್ಗಟ್ಟಿನ ಮಂತ್ರವಾಗಿಸಿದ್ದಾರೆ. ಕಾನೂನು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎರಡು ಬೃಹತ್ ಕಾದಂಬರಿಗಳ ಮೂಲಕ ಪ್ರಕೃತಿ ಮತ್ತು ಮಹಿಳೆಯರ, ಗ್ರಾಮಿಣ ಜನರ ಬದುಕು ಬವಣೆಗಳನ್ನು ಒಂದೊಂದಕ್ಕೂ ಅವಿನಾಭಾವ ಸಂಬಂಧವನ್ನು ಜೋಡಿಸುವ ಪರಿ ನಿಜಕ್ಕೂ ಆಶ್ಚರ್ಯಕರ, ಆಧ್ಯಾತ್ಮಿಕ ಸಾಧನೆಯನ್ನು ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಿ ಶ್ರೀಸಾಮಾನ್ಯನು ಭಗವಂತನೆಡೆಗೆ ಹೋಗುವ ಸನ್ಮಾರ್ಗವನ್ನು ತೋರಿಸಿದ್ದಾರೆಂದು ವಿವರಿಸುತ್ತಾ ಕುವೆಂಪು ವಿರಚಿತ ಭಾವಗೀತೆಗಳನ್ನು ಹಾಡಿ ರಂಜಿಸಿದರು. ರಾಷ್ಟ್ರಕವಿ ಕುವೆಂಪು ಸಂಘದ ಅಧ್ಯಕ್ಷರಾದ ಬೋರಲಿಂಗಪ್ಪ ಅವರು ಅಧ್ಯಕ್ಷತೆ ವಹಿಸಿ ಕನ್ನಡ, ಕನ್ನಡಿಗರು, ಕರ್ನಾಟಕದ ಬಗೆಗೆ ಅಭಿಮಾನ, ಪ್ರೀತಿ ಇಟ್ಟು ಪ್ರತಿಯೊಬ್ಬ ನಾಡಿನ ನಾಗರೀಕರ ಕರ್ತವ್ಯ ಎಂದರು.

ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಬಿ.ಎಂ.ರಾಜಗೋಪಾಲ್ ಅವರು ಕನ್ನಡ ಭಾಷೆಯ ಶ್ರೇಷ್ಠ ಕವಿ ಕುವೆಂಪು ಎಂದರು. ಸಂಘದ ಕಾರ್ಯಾಧ್ಯಕ್ಷ ವಿ.ರೆಡ್ಡಿ, ಎ.ಐ.ಸಿ.ಸಿಯ ರಮೇಶ್, ಹೆಚ್.ಎ.ಎಲ್.ಕಾರ್ಮಿಕ ಸಂಘದ ಟಿ.ಎನ್.ನರಸಿಂಹಮೂರ್ತಿ, ಹೆಚ್.ಎ.ಎಲ್.ನ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ಸುರೇಶ್, ಗೌಡಯ್ಯ, ಶ್ರೀಮತಿ ಬಿಂದು, ಮುಂತಾದವರಿದ್ದರು. ಹೆಚ್.ಎ.ಎಲ್. ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಐ.ಆರ್ .ಡಿ.ಸಿ ವಿಭಾಗದ ವಾಸು, ಹೆಚ್.ಎ.ಎಲ್.ದುರಸ್ಥಿ ವಿಭಾಗದ ಧನಂಜಯ್, ಸೆಕ್ಯೂರಿಟಿ ಕರೀಗೌಡ ಮುಂತಾದವರಿಗೆ ಇದೇ ಸಂದರ್ಭದಲ್ಲಿ ಅತಿಥಿ ಡಾ.ಸಿಸಿರಾ ಮತ್ತು ಗಣ್ಯರು ಸನ್ಮಾನಿಸಿ ಬೀಳ್ಕೊಡಲಾಯಿತು.
