Bhagavad Gita
ಶ್ಲೋಕ – 09
ಕವಿಂ ಪುರಾಣಮನುಶಾಸಿತಾರಮಣೋರಣೀಯಾಂಸಮನುಸ್ಮರೇದ್ ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸಃ ಪರಸ್ತಾತ್ ॥೯॥
ಉಚ್ಚಾರಣೆ:– ಕವಿಮ್ ಪುರಾಣಮ್ ಅನುಶಾಸಿತಾರಮ್ ಅಣೋಃ ಅಣೀಯಾಂಸಮ್ ಅನುಸ್ಮರೇತ್ ಯಃ ।
ಸರ್ವಸ್ಯ ಧಾತಾರಮ್ ಅಚಿಂತ್ಯ ರೂಪಮ್ ಆದಿತ್ಯ ವರ್ಣಮ್ ತಮಸಃ ಪರಸ್ತಾತ್ –
ಎಲ್ಲವನ್ನು ಬಲ್ಲವನು, ಎಲ್ಲಕ್ಕಿಂತ ಮೊದಲಿದ್ದವನು, ಎಲ್ಲರ ಒಡೆಯ, ಅಣುವಿಗಿಂತ ಅಣು, ಎಲ್ಲವನ್ನು ಹೊತ್ತು ಸಲಹುವವನು, ಬಗೆಗೆ ನಿಲುಕದ ನಿಟ್ಟಿನವನು, ಸೂರ್ಯನಂತೆ ಬೆಳಗುವವನು,ಕತ್ತಲಿನಾಚೆಗಿರುವವನು[ಸಾವಿರದವನು]-ಹೀಗೆಂದು ಅವನನ್ನು ಸ್ಮರಿಸುವವನು[ಅವನನ್ನೆ ಸೇರುತ್ತಾನೆ].
ನಮ್ಮ ಅಂತರ್ಯಾಮಿ ಭಗವಂತನನ್ನು ಧ್ಯಾನ ಮಾಡುವಾಗ ‘ಅನುಸಂಧಾನ ಮಾಡಬೇಕಾದ ವಿಷಯಗಳನ್ನು’ ಕೃಷ್ಣ ಇಲ್ಲಿ ಬಿಡಿಸಿ ಬಿಡಿಸಿ ಹೇಳುತ್ತಾನೆ.
ಕೃಷ್ಣ ಹೇಳುತ್ತಾನೆ “ಭಗವಂತನನ್ನು ಕವಿ ಎಂದು ಉಪಾಸನೆ ಮಾಡು” ಎಂದು. ಇಲ್ಲಿ ಕವಿ ಎಂದರೆ ಸರ್ವಜ್ಞ ಎಂದರ್ಥ. ನಮಗೆ ಮೊದಲು ಬೇಕಾಗಿರುವುದು ಜ್ಞಾನ. ಜ್ಞಾನವಿಲ್ಲದೆ ಆನಂದವಿಲ್ಲ. ಇದಕ್ಕಾಗಿ ಭಗವಂತನಲ್ಲಿ ಮೊದಲು ಅರಿವನ್ನು ಬೇಡಬೇಕು. ಎರಡನೆಯದಾಗಿ ಭಗವಂತನನ್ನು ಪುರಾಣಮ್ ಎಂದು ಉಪಾಸನೆ ಮಾಡು ಎನ್ನುತ್ತಾನೆ ಕೃಷ್ಣ. ಪುರಾಣ ಎಂದರೆ ಎಲ್ಲಕ್ಕಿಂತ ಮೊದಲಿದ್ದವ ಮತ್ತು ಸರ್ವ ಕಾಲದಲ್ಲೂ ಏಕಪ್ರಕಾರನಾಗಿರುವವ. ನಮ್ಮ ಪುರ(ದೇಹ)ದೊಳಗೆ ಕೂತು ಪ್ರತಿಕ್ಷಣದಲ್ಲಿಯೂ ನಮ್ಮನ್ನು ನಿಯಂತ್ರಿಸುವವ ಎನ್ನುವ ಅನುಸಂಧಾನ.
ಮೂರನೆಯದಾಗಿ ಭಗವಂತ ‘ಅನುಶಾಸಿತಾರಮ್’. ಅಂದರೆ ಪ್ರತಿಯೊಂದನ್ನೂ ಕೂಡಾ ನಿಯಮನ(ಶಾಸನ) ಮಾಡುವವನು.

ನನ್ನ ಇರವು, ಜಗತ್ತಿನ ಪ್ರತಿಯೊಂದು ವಸ್ತುವಿನ ಇರವು-ಅವನ ನಿಯಂತ್ರಣಕ್ಕೊಳಪಟ್ಟಿದೆ; ಭಗವಂತ ಪ್ರತಿಯೊಂದು ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಶಾಸನ ಮಾಡುತ್ತಾನೆ-ಎಂದು ಅರಿತು ಅವನನ್ನು ಅನುಸಂಧಾನ ಮಾಡಬೇಕು. ಸಮಸ್ತ ಬ್ರಹ್ಮಾಂಡದಲ್ಲಿ ತುಂಬಿದ ಆ ಭಗವಂತನೇ ಅಣುವಿಗಿಂತ ಅಣುವಾಗಿ ಜೀವ ಸ್ವರೂಪದ ಒಳಗೂ ತುಂಬಿದ್ದಾನೆ. “ಎಲ್ಲವನ್ನು ಧರಿಸಿದ ಭಗವಂತನೇ ನಮ್ಮೊಳಗೆ ಕೂತು ಪೋಷಣೆ ಮಾಡುತ್ತಿದ್ದಾನೆ. ಆತ ಇಡೀ ವಿಶ್ವದ ಧಾರಣೆ-ಪೋಷಣೆ ಮಾಡುವ ಶಕ್ತಿ.
ಆತ ಸರ್ವರಿಗೂ ಸರ್ವಾಭೀಷ್ಟವನ್ನು ಕೊಡುವವ” ಎಂದು ಅವನನ್ನು ಧ್ಯಾನ ಮಾಡಬೇಕು.
ಭಗವಂತ ನಮ್ಮ ಕಲ್ಪನೆಗೆ ಎಟುಕದ ವಸ್ತು ಎಂದು ನಾವು ತಿಳಿದಿರಬೇಕು. ಆತನದು ನಮ್ಮ ಮಾತು ಮನಸ್ಸಿಗೆ ಮುಟ್ಟದ ರೂಪ. ಧ್ಯಾನದಲ್ಲಿ ಜೀವಸ್ವರೂಪದ ಕಣ್ಣಿನಿಂದ ಭಗವಂತನನ್ನು ನೋಡಿದರೆ ಆತ ಉದಿಸುವ ಸೂರ್ಯನಂತೆ ಕಾಣುತ್ತಾನೆ. ಆತನ ಬಣ್ಣ ಪ್ರಕೃತಿ ನಿರ್ಮಿತವಾದ ಬಣ್ಣವಲ್ಲ, ಅದು ತ್ರಿಗುಣಾತೀತವಾದ ಎಂದೂ ಅಳಿವಿರದ ಅಪ್ರಾಕೃತ ಬಣ್ಣ. ಹೀಗೆ ಭಗವಂತನನ್ನು ತಿಳಿದು ನಿರಂತರ ಚಿಂತನೆ ಮಾಡುವವ ತನ್ನ ದೇಹ ತ್ಯಾಗ ಮಾಡುವಾಗ ಭಗವಂತನನ್ನೇ ನೆನೆದು ಭಗವಂತನನ್ನು ಸೇರುತ್ತಾನೆ.
ಇದನ್ನು ಓದು: ಭಗವದ್ಗೀತೆ ಅಧ್ಯಾಯ 8 ಶ್ಲೋಕ-8..!
