ಬೇಲೂರು- ತಾಲ್ಲೂಕಿನ ಹಳೇಬೀಡು ಗ್ರಾಮ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆತ್ತಪ್ಪಯ್ಯನ ಕೆರೆ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ನೂತನ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಹೆಚ್ ಕೆ ಸುರೇಶ್ ಭೂಮಿ ಪೂಜೆ ನೆರವೇರಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್ ಕೆ ಸುರೇಶ್, ಸಣ್ಣ ನೀರಾವರಿ ಇಲಾಖೆಯ ಮೂಲಕ ಮಲೆನಾಡು ಹಾಗೂ ಅರೆಮಲೆನಾಡು, ಬಯಲುಸೀಮೆ ಪ್ರದೇಶಗಳ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಚೆಕ್ಡ್ಯಾಂ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ . ಪ್ರಸ್ತುತ ಹಳೇಬೀಡು ಗ್ರಾಮ ವ್ಯಾಪ್ತಿಯಲ್ಲಿ ರೂ. 50 ಲಕ್ಷ ವೆಚ್ಚದ ಚೆಕ್ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಸುಮಾರು ರೂ. 10 ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ಇನ್ನೂ ರೂ. 15 ಕೋಟಿ ವೆಚ್ಚದ ಕಾಮಗಾರಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
ಈ ಚೆಕ್ಡ್ಯಾಂ ನಿರ್ಮಾಣದಿಂದ ಹಳೇಬೀಡು, ಮಾದಿಹಳ್ಳಿ ಹಾಗೂ ಹಾವಗಲ್ ಹೋಬಳಿ ವ್ಯಾಪ್ತಿಯ ರೈತರಿಗೆ ಮಹತ್ವದ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದ ಭೂಗರ್ಭ ಜಲಮಟ್ಟ ಹೆಚ್ಚಳವಾಗುವುದರೊಂದಿಗೆ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ನೀರಾವರಿ ವ್ಯವಸ್ಥೆ ಸುಧಾರಣೆಯಿಂದ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಲಿದ್ದು, ಇಲ್ಲಿಂದ ರಫ್ತಾಗುವ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸಲು ಅನುಕೂಲವಾಗಲಿದೆ. ಇದರ ಪರಿಣಾಮವಾಗಿ ರೈತರ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಬಲಗೊಳ್ಳಲಿದೆ ಎಂದರಲ್ಲದೆ ಹಿಂದೆ ಸುಮಾರು 17 ಎಕರೆ ಒತ್ತುವರಿಯಾಗಿದ್ದ ಕೆರೆ ಪ್ರದೇಶಗಳನ್ನು ತೆರವುಗೊಳಿಸಲಾಗಿದ್ದು, ಈ ಯೋಜನೆಯಿಂದ ಸುಮಾರು 80 ಗ್ರಾಮಗಳಿಗೆ ನೇರ ಹಾಗೂ ಪರೋಕ್ಷವಾಗಿ ಪ್ರಯೋಜನವಾಗಲಿದೆ.
ಕಾಮಗಾರಿಯ ಗುಣಮಟ್ಟದ ಬಗ್ಗೆ ವಿಶೇಷವಾಗಿ ಗಮನ ಹರಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದ ಶಾಸಕರು, ಕಾಮಗಾರಿ ವೇಳೆ ಅಕ್ಕಪಕ್ಕದ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದರು.
ಈ ಶಂಕುಸ್ಥಾಪನಾ ಸಮಾರಂಭದಲ್ಲಿ ತಾಲ್ಲೂಕ್ ಪಂಚಾಯತಿ ಮಾಜಿ ಸದಸ್ಯ ಸೋಮಣ್ಣ, ಯಲಹಂಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ್, ನವೀನ್, ಶಿವನಾಗ್, ಶೇಖರ್, ಶಿವಣ್ಣ ಪ್ರಸನ್ನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
