ಕೊರಟಗೆರೆ :- ನಗರ ಪ್ರದೇಶಗಳ ಮಕ್ಕಳಿಗಿಂತ ಗ್ರಾಮಾಂತರ ಪ್ರದೇಶದ ಮಕ್ಕಳು ಸಹಜವಾಗಿಯೇ ಹೆಚ್ಚು ಪ್ರತಿಭಾವಂತರಾಗಿದ್ದು, ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಅವರು ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಿಜ್ವಾನ್ ಪಾಷಾ ಅವರು ಹೇಳಿದರು.
ತಾಲೂಕಿನ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಳಿಗಾಲದ ಹಿನ್ನೆಲೆಯಲ್ಲಿ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ಜಯರಾಮ್ ಎಂ. ಅವರ ಪ್ರಯತ್ನದಿಂದ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಸ್ವೆಟರ್ಗಳನ್ನು ವಿತರಿಸಲಾಗುತ್ತಿದೆ. ದಾನಿಗಳು ತಮ್ಮ ಹೆಸರು ಪ್ರಕಟಿಸದೆ ಗ್ರಾಮಾಂತರ ಶಾಲೆಯ ಮಕ್ಕಳಿಗೆ ಸಹಾಯ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು.
ಮೊದಲ ಹಂತವಾಗಿ ಶಾಲೆಯಲ್ಲಿನ 78 ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸ್ವೆಟರ್ಗಳನ್ನು ವಿತರಿಸುವ ಉದ್ದೇಶವಿದೆ ಎಂದು ತಿಳಿಸಿದರು. ಚಳಿಗಾಲದಲ್ಲಿ ಮಕ್ಕಳಿಗೆ ಈ ಸ್ವೆಟರ್ಗಳು ಬಹಳ ಉಪಯುಕ್ತವಾಗಿದ್ದು, ಇಂತಹ ಮಾನವೀಯ ಸೇವೆಗೆ ಇನ್ನಷ್ಟು ದಾನಿಗಳು ಮುಂದಾಗಬೇಕು. ವಿಶೇಷವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಶಿಕ್ಷಣಕ್ಕೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಚಿಕ್ಕಪ್ಪಯ್ಯ, ಅಶೋಕ್ ಪೂಜಾರ್, ಜಯರಾಮ್ ಎಂ., ಕೃಷ್ಣಪ್ಪ, ಗಂಗಾಧರ ಟಿ.ಎಸ್., ಸುಜಾತ ಎಸ್. ಸೇರಿದಂತೆ ಇತರ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
– ಶ್ರೀನಿವಾಸ್ ಕೊರಟಗೆರೆ.
