ಹಾಸನ: ನಗರದ ಯುನೈಟೆಡ್ ಶಾಲಾ ಆವರಣ, ಬಿ.ಕಾಟೀಹಳ್ಳಿಯಲ್ಲಿ (ಅರಸೀಕೆರೆ ರಸ್ತೆ) ಕ.ವಿ.ಪ್ರ.ನಿ.ನಿ. ಹಾಗೂ ಸೆಸ್ಕ್, ಹಾಸನ ಇವರ ಸಹಯೋಗದಲ್ಲಿ ಆಯೋಜಿಸಲಾದ ಲೆಜೆಂಡ್ಸ್ ಕ್ರಿಕೆಟ್ ಲೀಗ್–2 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ಪವರ್ ಯುನೈಟೆಡ್ ಕ್ರಿಕೆಟ್ ಟೀಮ್, ಹಾಸನ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 8.30 ಗಂಟೆಗೆ ನೆರವೇರಿದ್ದು, ಎರಡು ದಿನಗಳ ಕಾಲ ಕ್ರೀಡಾಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತು.

ಪಂದ್ಯಾವಳಿಯ ಸಮಾರೋಪ ಸಮಾರಂಭವು ಜನವರಿ 11, 2026 ಭಾನುವಾರ ಸಂಜೆ 4.00 ಗಂಟೆಗೆ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ಇಂಡಿಯಾದ ಕ್ರೀಕೆಟ್ ದಿಗ್ಗಜ, ದಿ ವಾಲ್ ಆಫ್ ಕ್ರೀಕೆಟ್ ಖ್ಯಾತಿಯ ರಾಹುಲ್ ದ್ರಾವಿಡ್ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ.ವಿ.ಪ್ರ.ನಿ.ನಿ ಹಾಗೂ ಸೆಸ್ಕ್ ಹಾಸನ ವೃತ್ತದ ಹಿರಿಯ ಅಧಿಕಾರಿಗಳು, ಕಾರ್ಯಪಾಲಕ ಹಾಗೂ ಅಧೀಕ್ಷಕ ಇಂಜಿನಿಯರ್ಗಳು, ಲೆಕ್ಕಾಧಿಕಾರಿಗಳು, ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕ್ರಿಕೆಟ್ ಪಂದ್ಯಾವಳಿಯ ಮೂಲಕ ನೌಕರರ ನಡುವೆ ಸೌಹಾರ್ದತೆ, ತಂಡಭಾವನೆ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಉದ್ದೇಶ ಈಡೇರಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಪಂದ್ಯಾವಳಿಯಲ್ಲಿ ವಿವಿಧ ತಂಡಗಳು ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೌಶಲ್ಯ ಪ್ರದರ್ಶಿಸಿದವು. ಅಂತಿಮ ಪಂದ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು, ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಹಾಸನ ವೃತ್ತದ ಎಲ್ಲಾ ಸಂಘಗಳ ಸ್ಥಳೀಯ ಹಾಗೂ ಪ್ರಾಥಮಿಕ ಸಮಿತಿ ಪದಾಧಿಕಾರಿಗಳು, ಕ.ವಿ.ಪ್ರ.ನಿ.ನಿ ಮತ್ತು ಸೆಸ್ಕ್ ನೌಕರರು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
