ತುಮಕೂರು: ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಘ ಹಾಗೂ ಆಂಡಾಳ್ ಗೋಷ್ಠಿಯ ಆಶ್ರಯದಲ್ಲಿ ನಗರದ ಮಾರುತಿ ನಗರದ ಶ್ರೀವೈಷ್ಣವ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಆಂಡಾಳ್ ರಂಗಮನ್ನಾರ್ರವರ ತಿರುಕಲ್ಯಾಣೋತ್ಸವ ವೈಭವದಿಂದ ನೆರವೇರಿತು.
ಇದರ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಆಂಡಾಳ್ ರಂಗಮನ್ನಾರ್ರವರ ತಿರುಕಲ್ಯಾಣೋತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಶ್ರೀವೈಷ್ಣವ ಸಮಾಜದ ಮುಖಂಡರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿ, ಧಾರ್ಮಿಕತೆಗೆ ಹೆಸರಾದ ಶ್ರೀವೈಷ್ಣವ ಸಮಾಜದವರು ಸಂಘಟಿತರಾಗಿ ತಮ್ಮ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಸಮುದಾಯದ ಬಡವರಿಗೆ ಸಹಾಯ ಮಾಡಿ ಅವರೂ ಮುಖ್ಯವಾಹಿನಿಗೆ ಬರಲು ಸಹಕರಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಘಕ್ಕೆ ನೂತನವಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಟಿ.ಎಸ್.ಮೋಹನ್ಕುಮಾರ್, ಗೌರವಾಧ್ಯಕ್ಷ ನಂದಗೋಪಾಲ್, ಉಪಾಧ್ಯಕ್ಷ ನವರತ್ನಕುಮಾರ್, ಕಾರ್ಯದರ್ಶಿ ಯೋಗಾನಂದ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಖಜಾಂಚಿಯಾದ ಭಕ್ತವತ್ಸಲ, ಜ್ಯೋತಿ ಆಚಾರ್ಯ, ನಿರ್ದೇಶಕರಾದ ನಳಿನಾ ಶ್ರೀವಾತ್ಸವ, ಸತ್ಯನಾರಾಯಣ್, ವೆಂಕಟೇಶ್, ಹೆಗ್ಗೆರೆ ರವಿಕುಮಾರ್, ಪುಟ್ಟರಾಜು, ಹೆಚ್.ಎನ್.ಕುಮಾರ್, ಎಸ್.ಶ್ರೀನಿವಾಸ್, ದಿಬ್ಬೂರು ಜನಾರ್ಧನ್, ಕೇಶವಮೂರ್ತಿ ಸೇರಿದಂತೆ ಶ್ರೀವೈಷ್ಣವ ಸಮಾಜದ ವಿವಿಧ ಮುಖಂಡರು ಆಂಡಾಳ್ ರಂಗಮನ್ನಾರ್ರವರ ತಿರುಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.
– ಚಂದ್ರಚೂಡ ಐ ಕೆ
