ಟಿ.ನರಸೀಪುರ : ಜನವರಿ 26 ರಂದು ಆಚರಿಸುವ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಕಳೆದ ಭಾರಿ ಆಚರಿಸಿದ ಮಾದರಿಯಲ್ಲೇ ಆಚರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ವಿವಿಧ ಜಯಂತಿಗಳನ್ನು ಆಚರಿಸುವ ಸಂಬಂಧ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಹಶಿಲ್ದಾರ್ ಆದಂತಹ ಟಿ.ಜೆ.ಸುರೇಶ್ ಆಚಾರ್ ರವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ತಹಶಿಲ್ದಾರ್ ಮಾತನಾಡಿ, ತಾಲ್ಲೂಕು ಆಡಳಿತ ವತಿಯಿಂದ ದಿನಾಂಕ:21.01.2026 ರಂದು “ಅಂಬಿಗರ ಚೌಡಯ್ಯ” ದಿನಾಂಕ:25.01.2026 ರಂದು “ಸವಿತಾ ಮಹರ್ಷಿ” 01.02.2026 ರಂದು “ಮಡಿವಾಳ ಮಾಚೀದೇವ” 10.02.2026 ರಂದು “ಕಾಯಕ ಶರಣರ” 15.02.2026 ರಂದು “ಶ್ರೀ ಸಂತ ಸೇವಾಲಾಲ್” ದಿನಾಂಕ:19.02.2026 ರಂದು “ಛತ್ರಪತಿ ಶಿವಾಜಿ” ದಿನಾಂಕ:20.02.2026 ರಂದು “ಶ್ರೀ ಸಂತ ಕವಿ ಸರ್ವಜ್ಞ” ರವರುಗಳ ದಿನಾಚರಣೆಯನ್ನು ತಹಶಿಲ್ದಾರ್ ಕಚೇರಿ ಅಥವಾ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುವುದೆಂದರು.

ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ.ಬಿ.ಮರಯ್ಯ ಮಾತನಾಡಿ ಈ ಭಾರಿಯ ಗಣರಾಜ್ಯೋತ್ಸವ ಆಚರಿಸುವ ಸಂಪೂರ್ಣ ಜವಾಬ್ದಾರಿಯನ್ನು ಟಿ.ನರಸೀಪುರ ಹಾಗೂ ಬನ್ನೂರು ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳಿಗೆ ನೀಡಿ.ಅವರು ಯಾವುದೇ ಜಯಂತಿಯ ಜವಾಬ್ದಾರಿಗಳನ್ನು ತೆಗೆದುಕೊಂಡಿರುವುದಿಲ್ಲ ಎಂದರು.
ಇದಕ್ಕೆ ಬನ್ನೂರು ಮುಖ್ಯಾಧಿಕಾರಿಗಳು ಪ್ರತಿಕ್ರಿಯೆ ನೀಡಿ ತಾಲ್ಲೂಕು ಆಡಳಿತದ ಜೊತೆ ಕೈ ಜೋಡಿಸುತ್ತೇವೆಂದಾಗ ಇದಕ್ಕೆ ಒಪ್ಪದ ಮರಯ್ಯರವರು ಸಾಧ್ಯವೇ ಇಲ್ಲಾ.ವರ್ಷದಲ್ಲಿ ಅನೇಕ ರಾಷ್ಟ್ರೀಯ ಹಬ್ಬಗಳು ಬರುತ್ತವೆ.ಅವುಗಳನ್ನು ತಾಲ್ಲೂಕು ಅಧಿಕಾರಿಗಳೇ ಜವಾಬ್ದಾರಿ ಹೊತ್ತು ಮಾಡುತ್ತಿದ್ದಾರೆ.ಈ ಭಾರಿ ನೀವು ಆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದಾಗ ನಾವು ನಮ್ಮ ಮೇಲಾಧಿಕಾರಿಗಳನ್ನು ಕೇಳಿ ನಿರ್ಧರಿಸಲಾಗುವುದೆಂದರು.
ಪುರಸಭೆ ಆಡಳಿತಾಧಿಕಾರಿಗಳು ಒಪ್ಪಿಗೆ ಸೂಚಿಸಿಲ್ಲವಾದ್ದರಿಂದ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆಂದು ನಿರ್ಧಾರವಾಗಿಲ್ಲ.
ಬೆರಳಣಿಕೆಯಷ್ಟು ಜಯಂತಿ ಆಚರಿಸುವ ಸಭೆಗೆ ಮಡಿವಾಳ ಮಾಚಿದೇವ ಸಮುದಾಯದ ಮೂವರು ಮುಖಂಡರು ಬಿಟ್ಟರೆ ಇತರೆ ಸಮುದಾಯದ ಮುಖಂಡರು ಗೈರಾಗಿದ್ದರು.ಜಯಂತಿ ಆಚರಣೆ ಮಾಡುವ ಆ ಸಮುದಾಯದ ಮುಖಂಡರ ಗೈರು ಜಯಂತಿ ಆಚರಣೆ ನಿರಾಸಕ್ತಿಗೆ ಪೂರ್ವಭಾವಿ ಸಭೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ.ಮನ್ಸೂರ್ ಆಲಿ,ಮೂಗೂರು ಎಂ.ಎಂ.ಜಗದೀಶ್, ಪ್ರಭಾರ ಇಒ ರಂಗಸ್ವಾಮಿ, ಬಿಇಒ ಶಿವಮೂರ್ತಿ, ತೋಟಗಾರಿಕೆ ಇಲಾಖೆ ಶಾಂತ,ಮೀನುಗಾರಿಕೆ ಇಲಾಖೆ ಶ್ವೇತ,ಹಿಂದುಳಿದ ವರ್ಗಗಳ ಇಲಾಖೆ ರಾಜಣ್ಣ,ಪಿಡಬ್ಲೂಡಿ ಸತೀಶ್ ಚಂದ್ರ,ಸೆಸ್ಕಾಂ ವೀರೇಶ್,ಕುಡಿಯುವ ನೀರು ಸರಬರಾಜು ಇಲಾಖೆ ಶಿವರಾಜ್, ಟಿಎಂಒ ಡಾ.ರವಿಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು,ಸಹಾಯಕರು ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಜರಿದ್ದರು.
- ಎಂ.ನಾಗೇಂದ್ರಕುಮಾರ್
