ನವದೆಹಲಿ: BloombergNEF (BNEF) ಇತ್ತೀಚಿನ ಅಂದಾಜು ಪ್ರಕಾರ, 2026ರಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸೌರ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ. ವಾರ್ಷಿಕ ಸೌರ ಸಾಮರ್ಥ್ಯ ಸೇರ್ಪಡೆ ಆಧಾರದ ಮೇಲೆ ಈ ಸಾಧನೆ ಸಾಧ್ಯವಾಗಲಿದೆ ಎಂದು ವರದಿ ತಿಳಿಸಿದೆ.
BNEF ಅಂಕಿಅಂಶಗಳ ಪ್ರಕಾರ, ಭಾರತವು 2026ರಲ್ಲಿ 50 ಗಿಗಾವಾಟ್ಗಿಂತ ಹೆಚ್ಚು ಹೊಸ ಸೌರ ಸಾಮರ್ಥ್ಯವನ್ನು ಸೇರಿಸಲಿದೆ. ಇದು ಸುಮಾರು 6 ಶೇಕಡಾ ಬೆಳವಣಿಗೆಯಾಗಿದೆ. ಅದೇ ಅವಧಿಯಲ್ಲಿ ಅಮೆರಿಕವು ಸುಮಾರು 14 ಶೇಕಡಾ ಕುಸಿತವನ್ನು ಎದುರಿಸಲಿದೆ ಎಂದು ಅಂದಾಜಿಸಲಾಗಿದ್ದು, ಕೇವಲ 44 ಗಿಗಾವಾಟ್ ಸುತ್ತಮುತ್ತ ಮಾತ್ರ ಹೊಸ ಸೌರ ಸಾಮರ್ಥ್ಯವನ್ನು ಸೇರಿಸುವ ಸಾಧ್ಯತೆ ಇದೆ.
ಇತ್ತ ಚೀನಾ ಇನ್ನೂ ವಿಶ್ವದ ಅತಿದೊಡ್ಡ ಸೌರ ಮಾರುಕಟ್ಟೆಯಾಗಿ ಮುಂದುವರಿಯಲಿದೆ. 2026ರಲ್ಲಿ ಚೀನಾ ಸುಮಾರು 321 ಗಿಗಾವಾಟ್ ಸೌರ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದ್ದರೂ, ಅದರ ಬೆಳವಣಿಗೆಯ ವೇಗದಲ್ಲಿ ಕ್ರಮೇಣ ಕುಸಿತ ಕಂಡುಬರುತ್ತಿದೆ ಎಂದು ವರದಿ ಹೇಳುತ್ತದೆ.
ಇದನ್ನು ಓದು: ಮಾಜಿ ಸೈನಿಕರಿಗೆ ಗುಡ್ ನ್ಯೂಸ್: ಮಕ್ಕಳ ಶಿಷ್ಯವೇತನ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಭಾರತದ ಸೌರ ಕ್ಷೇತ್ರದ ವೇಗದ ಬೆಳವಣಿಗೆಗೆ ಹಲವು ಕಾರಣಗಳಿವೆ. ದೊಡ್ಡ ಪ್ರಮಾಣದ ಯೂಟಿಲಿಟಿ-ಸ್ಕೇಲ್ ಸೌರ ಯೋಜನೆಗಳ ಅನುಷ್ಠಾನ, ಸರ್ಕಾರದ ಸಬ್ಸಿಡಿಗಳ ನೆರವಿನಿಂದ ರೂಫ್ಟಾಪ್ ಸೌರ ಯೋಜನೆಗಳ ವಿಸ್ತರಣೆ ಮತ್ತು ಹೂಡಿಕೆಗಳಿಗೆ ಅನುಕೂಲಕರ ನೀತಿಗಳು ಪ್ರಮುಖ ಕಾರಣಗಳಾಗಿವೆ.
2025ರಲ್ಲಿ ಭಾರತವು ಈಗಾಗಲೇ ದಾಖಲೆಯ 35 ಗಿಗಾವಾಟ್ಗಿಂತ ಹೆಚ್ಚು ಸೌರ ಸಾಮರ್ಥ್ಯವನ್ನು ಸೇರಿಸಿದ್ದು, ಅದರಲ್ಲೂ ಮೊದಲ 11 ತಿಂಗಳಲ್ಲೇ ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲೇ 2026ರಲ್ಲಿ ಭಾರತವು ಜಾಗತಿಕ ಸೌರ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೇರುವ ವಿಶ್ವಾಸ ವ್ಯಕ್ತವಾಗಿದೆ.

[…] […]