ಕೆ.ಆರ್.ಪೇಟೆ,ಜ.17: ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರವಾಗಿ ಕೆಲಸ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇರ ಅನುಧಾನ ನೀಡುತ್ತಿವೆ. ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧುಘಟ್ಟ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು 15ನೇ ಹಣಕಾಸು ಮತ್ತು ಸ್ಥಳೀಯ ಸಂಪನ್ಮೂಲ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸಭಾಂಗಣ ಹಾಗೂ ಡಿಟಿಟಲ್ ಗ್ರಂಥಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ತಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪ, ಗ್ರಾಮ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ಗ್ರಾಮೀಣ ಜನರ ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಬೇಕು. ಪ್ರತಿ 4ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಈ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು. ನರೇಗಾ ಯೋಜನೆಯು ಗ್ರಾಮಗಳ ಅಭಿವೃದ್ಧಿಗೆ ವರಧಾನವಾದ ಯೋಜನೆಯಾಗಿದೆ.

ನರೇಗಾ ಯೋಜನೆ ಮೂಲಕ ಜಾನುವಾರು ತೊಟ್ಟಿಗಳ ನಿರ್ಮಾಣ, ಕೊಟ್ಟಿಗೆಗಳ ನಿರ್ಮಾಣ, ಅಂತರ್ಜಲ ವೃದ್ದಿಗೆ ಚೆಕ್ ಡ್ಯಾಂಗಳ ನಿರ್ಮಾಣ, ಜಲಮೂಲಗಳ ಸಂರಕ್ಷಣೆಗೆ ಕೆರೆ ಕಟ್ಟೆಗಳನ್ನು ಅಭಿವೃದ್ಧಿಪಡಿಸುವುದು. ರೈತರಿಗೆ ದಾನ್ಯ ಒಕ್ಕಣೆ ಕಣ ನಿರ್ಮಾಣ ಮಾಡಿಕೊಡುವುದು. ಕುರಿ ಮತ್ತು ಮೇಕೆ ಶೆಡ್ ನಿರ್ಮಾಣ, ಕೃಷಿ ಅರಣ್ಯ, ರೈತರಿಗೆ ಜಮೀನಿಗೆ ಹೋಗಲು ಬಂಡಿ ರಸ್ತೆ ನಿರ್ಮಾಣ, ರೈತರ ಜಮೀನಿಗೆ ನೀರು ಹರಿಸುವ ಕಾಲುವೆಗಳ ಅಭಿವೃದ್ಧಿ, ರೈತರ ಬಾಳೆ, ತೆಂಗು, ಅಡಿಕೆ ಅಭಿವೃದ್ಧಿ, ರೇಷ್ಮೆ ಕೃಷಿ ಅಭಿವೃದ್ಧಿ ಸೇರಿದಂತೆ ಹತ್ತಾರು ರೈತರಿಗೆ ಉಪಯೋಗವಾಗುವ ಯೋಜನೆಗಳನ್ನು ಕೈಗೊಳ್ಳಲು ಅವಕಾಶವಿದೆ ಹಾಗಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಮಿತಿ ಇಲ್ಲದಷ್ಟು ಅನುಧಾನ ಬಳಸಿಕೊಂಡು ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧಿಸಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮಹಾದೇವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಕೆ.ಜೆ.ವಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಷ್ಮಾ, ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ವಿನೋದ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಲೋಕೇಶ್, ಗ್ರಾ.ಪಂ. ಉಪಾಧ್ಯಕ್ಷೆ ಸುಮಲತಾಚೆಲುವರಾಜು, ಪಿಡಿಓ ಕೆ.ಜೆ.ವಾಣಿ, ಗ್ರಾ.ಪಂ.ಸದಸ್ಯರಾದ ದಿವ್ಯಗಿರೀಶ್, ಆಶಾ ಸೋಮಶೇಖರ್, ಎಸ್.ಆರ್.ನವೀನ್ಕುಮಾರ್, ನಂಜಪ್ಪ, ಎಸ್.ಸಿ.ನಾಗೇಶ್, ಲಾವಣ್ಯಕುಮಾರ್, ಜ್ಯೋತಿನಾಗರಾಜು, ರಾಜೇಶ್ವರಿ ನರಸಿಂಹ, ಸೋಮಶೇಖರ್, ಎಂ.ಆರ್.ಶರತ್, ಶಾಂಭವಿ ಮಂಜಾಚಾರಿ, ಎಸ್.ಎಂ.ಇರ್ಫಾನ್, ಕಾರ್ಯದರ್ಶಿ ಮಾದಪ್ಪ, ಡಿಇಓ ನಂಜುಂಡಸ್ವಾಮಿ, ಬಿಲ್ ಕಲೆಕ್ಟರ್ ಯೋಗೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.
-ಶ್ರೀನಿವಾಸ್ ಆರ್.
