ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 77ನೇ ಗಣ ರಾಜ್ಯೋತ್ಸವ ಸಮಾರಂಭವು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಬಳಿಕ ಮಾತನಾಡಿದ ಎ.ಸಿ.ದಿವಿಕುಮಾರ್ ಅವರು ನಮ್ಮ ದೇಶದ ಏಕತೆ ಹಾಗೂ ಪ್ರತಿಯೊಬ್ಬ ನಾಗರೀಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕಾಪಾಡುವಲ್ಲಿ ಸಂವಿಧಾನದ ರಕ್ಷಣೆ ಅಗತ್ಯವಾಗಿದೆ. ಪ್ರತಿಯೊಬ್ಬರೂ ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದರಾಗಬೇಕು. ಸ್ವಾತಂತ್ರ್ಯ ಬರುವುದಕ್ಕೆ ನಮ್ಮ ದೇಶದ ಲಕ್ಷಾಂತರ ಮಹನೀಯರ ತ್ಯಾಗ ಬಲಿದಾನ, ನಿಸ್ವಾರ್ಥ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ. ಸುಖಾ ಸುಮ್ಮನೆ ಬ್ರಿಟೀಷರು ನಮಗೆ ಸ್ವಾತಂತ್ರ್ಯ ನೀಡಲಿಲ್ಲ. ಹಾಗಾಗಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಪವಿತ್ರ ಸಂವಿಧಾನದ ಮೂಲಕ ಉಳಿಸಿ ಸಂರಕ್ಷಣೆ ಮಾಡಿಕೊಂಡು ಹೋಗಬೇಕಾದ ಜವಾಬ್ದಾರಿ ದೇಶದ ಪ್ರತಿಯೊಬ್ಬ ನಾಗರೀಕರ ಮೇಲಿದೆ ಎಂದು ಹೇಳಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಬಿ.ಪುಟ್ಟಸ್ವಾಮೀಗೌಡ ಅವರು ಮಾತನಾಡಿ ದೇಶದ ಸಂವಿಧಾನ ರಕ್ಷಣೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಓದಿ ವಿದ್ಯಾವಂತರಾಗಬೇಕು ಈ ಮೂಲಕ ಭವ್ಯ ಭಾರತದ ಸತ್ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಉಪಪ್ರಾಂಶುಪಾಲ ಡಿ.ರಾಜೇಗೌಡ ಅವರು ಮಾತನಾಡಿ ಪ್ರಪಂಚದ ವಿವಿಧ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ನಮ್ಮ ಭಾರತ ದೇಶಕ್ಕೆ ಅಗತ್ಯವಿರುವ ಉತ್ತಮ ಅಂಶಗಳನ್ನೂ ಕ್ರೂಢಿಕರಿಸಿ ಸುಮಾರು 3ವರ್ಷಗಳ ಕಾಲ ಸಂವಿಧಾನವನ್ನು ಬರೆದು ನಮಗೆ ನೀಡಿದ್ದಾರೆ. ಸರ್ವರಿಗೂ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ನಮ್ಮ ಸಂವಿಧಾನವು ಯಶಸ್ವಿಯಾಗಿದೆ. ಹಾಗಾಗಿ ದೇಶದ ಜನತೆ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳು, ಕಾನೂನುಗಳು, ಕರ್ತವ್ಯಗಳನ್ನು ಪಾಲಿಸಿದರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಉಪಪ್ರಾಂಶುಪಾಲ ಡಿ.ರಾಜೇಗೌಡ, ಪಿಡಿಓ ಶಿಲ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್, ರೇಣುಕಾ ಈಶ್ವರ್, ಆರ್. ಶ್ರೀನಿವಾಸ್, ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಎ.ಸಿ.ಸಂತೋಷ್, ಸರ್ಕಾರಿ ಪ್ರೌಢಶಾಲೆಯ ಎಸ್.ಡಿ. ಎಂ.ಸಿ ಅಧ್ಯಕ್ಷ ಎ.ವಿ.ಕೃಷ್ಣ, ನಿವೃತ್ತ ಮುಖ್ಯ ಶಿಕ್ಷಕ ಬಿ.ಹೆಚ್.ಮಂಜೇಗೌಡ, ಗ್ರಾ.ಪಂ.ಕಾರ್ಯದರ್ಶಿ ಚಂದ್ರಕುಮಾರ್, ಎಸ್.ಡಿ.ಸಿ ಗೀತಾ, ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಾಂತಕುಮಾರಿ, ನಂಜಪ್ಪ, ಸೇರಿದಂತೆ ಹಲವು ಗಣ್ಯರು, ಶಾಲಾ ಮಕ್ಕಳು ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೀಡಿದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಗಮನ ಸೆಳೆದವು.ಇದೇ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಗ್ರಾಮಸಭೆ ನಡೆಸಿ ಉದ್ಯೋಗಖಾತ್ರಿ ಹೊಸ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.
