ಹಾಸನ: ಪೊಲೀಸ್–ಪತ್ರಕರ್ತರ ನಡುವೆ ಉತ್ತಮ ಬಾಂಧವ್ಯ ಅಗತ್ಯ – ಎಸ್ಪಿ ಶುಭಾನ್ವಿತ
ಹಾಸನ: ಪೊಲೀಸ್ ಹಾಗೂ ಪತ್ರಕರ್ತರ ನಡುವೆ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದ್ದು, ಈ ಸಂಬಂಧದಲ್ಲಿ ಭಾವನಾತ್ಮಕ ನಂಟು ಇಲ್ಲದಿದ್ದರೆ ಸಮನ್ವಯ ಕೊರತೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭಾನ್ವಿತ ಅವರು ಹೇಳಿದರು.
ನಗರದ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪತ್ರಕರ್ತರ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಸತ್ಯಕ್ಕಿಂತ ಸುಳ್ಳು ಸುದ್ದಿಗಳು ಹೆಚ್ಚು ವೈರಲ್ ಆಗುತ್ತಿರುವ ಇಂದಿನ ಸಂದರ್ಭದಲ್ಲಿ, ನಿಖರ ಹಾಗೂ ಪರಿಶೀಲಿತ ಮಾಹಿತಿ ನೀಡುವ ಜವಾಬ್ದಾರಿ ಮಾಧ್ಯಮದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ತಾವು 2018ರಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಪೋಸ್ಟಿಂಗ್ ಪಡೆದಿದ್ದು, ವಿವಾಹದ ನಂತರ ಹಾಸನಕ್ಕೆ ಎರಡನೇ ಪೋಸ್ಟಿಂಗ್ ಆಗಿ ಆಗಮಿಸಿದ್ದೇನೆ ಎಂದು ತಿಳಿಸಿದರು. ಜಿಲ್ಲೆಗೆ ಬಂದು ನಾಲ್ಕು ವಾರಗಳಾಗಿದ್ದು, ಎಲ್ಲಾ ವಲಯಗಳಿಂದಲೂ ಉತ್ತಮ ಸಹಕಾರ ದೊರೆತಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಮಾಧ್ಯಮದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಡ್ರಗ್ಸ್ ನಿರ್ಮೂಲನೆ ಮೊದಲ ಆದ್ಯತೆ
ಜಿಲ್ಲೆಯಲ್ಲಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಡ್ರಗ್ಸ್ ಪೆಡ್ಲರ್ಗಳ ವಿರುದ್ಧ ಯಾವುದೇ ರೀತಿಯ ತಗ್ಗುಮಾಡದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಮಹಿಳೆ–ಮಕ್ಕಳ ಸುರಕ್ಷತೆಗೆ ಒತ್ತು
ಮಹಿಳೆ ಮತ್ತು ಮಕ್ಕಳ ಸುರಕ್ಷತೆ ತಮ್ಮ ಎರಡನೇ ಆದ್ಯತೆಯಾಗಿದ್ದು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳ ಕುರಿತು ಗಂಭೀರ ಗಮನ ಹರಿಸಲಾಗುವುದು ಎಂದು ಹೇಳಿದರು. ಬಾಲ್ಯ ವಿವಾಹ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದಲ್ಲದೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲೆ–ಕಾಲೇಜುಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಬೀಟ್ ಮಾಡುವಂತೆ ‘ಅಕ್ಕ ಪಡೆ’ ಎಂಬ ವಿಶೇಷ ತಂಡವನ್ನು ನಿಯೋಜಿಸಲಾಗುವುದು. ವಿದ್ಯಾರ್ಥಿನಿಯರಿಗೆ ಕರಾಟೆ ಹಾಗೂ ಕಿಕ್ ಬಾಕ್ಸಿಂಗ್ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಸ್ತೆ ಅಪಘಾತ ತಡೆಗೆ ಕ್ರಮ
ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಪಿಡಬ್ಲ್ಯೂಡಿ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಾಸನ, ಅರಸೀಕೆರೆ ಹಾಗೂ ಸಕಲೇಶಪುರ ಪಟ್ಟಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಲು ಕ್ರಮ ವಹಿಸಲಾಗುವುದು ಎಂದರು.
ಅಪರಾಧ ನಿಯಂತ್ರಣದಲ್ಲಿ ಜನ–ಪೊಲೀಸ್ ಸಹಕಾರ
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದ ಎಸ್ಪಿ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಕುರಿತು ಮಾಹಿತಿ ಇದ್ದಲ್ಲಿ ನೇರವಾಗಿ ತಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಸಾರ್ವಜನಿಕರು ಸ್ವತಃ ವೀಡಿಯೊ ಮಾಡಿ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ, ಉಪಾಧ್ಯಕ್ಷರಾದ ನಂಜುಂಡೇಗೌಡ, ಮೋಹನ್, ಕಾರ್ಯದರ್ಶಿ ಕೆ.ಜಿ. ಸುರೇಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
