ಹಾಸನ: ಹಾಸನ ಜಿಲ್ಲೆಯಲ್ಲಿ ವೀಲ್ಹಿಂಗ್ ಪುಂಡರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಇತ್ತೀಚೆಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ರಸ್ತೆಯಲ್ಲಿ ಇಬ್ಬರು ಯುವಕರು ನೂರಾರು ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲೇ ಅಪಾಯಕಾರಿ ರೀತಿಯಲ್ಲಿ ವೀಲ್ಹಿಂಗ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ವಾಹನ ಸವಾರರಿಗೆ ಅಡ್ಡಿ ಮಾಡುತ್ತಲೇ, ಒಂದೇ ಚಕ್ರದಲ್ಲಿ ಬೈಕ್ ಚಲಾಯಿಸಿಕೊಂಡು ತೆರಳಿದ ಈ ಇಬ್ಬರು ಯುವಕರು ಸಾರ್ವಜನಿಕರ ಆತಂಕಕ್ಕೆ ಕಾರಣರಾದರು. ಈ ವೇಳೆ ಅಚಾನಕ್ವಾಗಿ ನಾಯಿಗಳು ರಸ್ತೆಗೆ ಅಡ್ಡ ಬಂದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವೀಲ್ಹಿಂಗ್ ಮಾಡುತ್ತಿದ್ದ ಬೈಕ್ ಅಪಘಾತಕ್ಕೀಡಾಗಬಹುದು ಎಂಬ ಆತಂಕದಿಂದ ಹಿಂದೆ ಬರುತ್ತಿದ್ದ ಕಾರು ಚಾಲಕನು ವಾಹನವನ್ನು ನಿಲ್ಲಿಸಿ ನಿಂತ ಘಟನೆ ಕೂಡ ನಡೆದಿದೆ. ಈ ಯುವಕರು
KA-31-J-5670 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಅಪಾಯಕಾರಿ ವೀಲ್ಹಿಂಗ್ ನಡೆಸಿರುವುದು ದೃಢಪಟ್ಟಿದೆ.
ಘಟನೆ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವೀಲ್ಹಿಂಗ್ ಮಾಡುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆ ಸುರಕ್ಷತೆಗೆ ಭಾರೀ ಸವಾಲಾಗಿರುವ ಇಂತಹ ಪುಂಡತನದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
