ಕೊರಟಗೆರೆ(ಕಸಬಾ): ಪಟ್ಟಣದಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿ ಹಾಗೂ ಛಲವಾದಿ ಸಮುದಾಯದ ಸಹಯೋಗದಲ್ಲಿ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಜಯಂತಿಯ ಅಂಗವಾಗಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಅಂಬೇಡ್ಕರ್ ಭವನದವರೆಗೆ ಅರೆ, ಕಹಳೆ ಸೇರಿದಂತೆ ವಿವಿಧ ಜಾನಪದ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಒನಕೆ ಓಬವ್ವ ಅವರ ವೇಷಧರಿಸಿದ ಬಾಲಕಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದಳು. ಮೆರವಣಿಗೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಶರತ್ ಕುಮಾರ್ , ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಗೂ ಛಲವಾದಿ ಸಮುದಾಯಗಳ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಮಾತನಾಡಿ ವೀರವನಿತೆ ಒನಕೆ ಓಬವ್ವ ಅವರ ಸಾಹಸ, ಶೌರ್ಯ ಹಾಗೂ ದೇಶಪ್ರೇಮ ಇಂದಿನ ಯುವಜನತೆ ಹೋರಾಟದ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶ ಹೇಳಿದರು. ಮತ್ತು ಛಲವಾದಿ ಸಮುದಾಯದ ಅಧ್ಯಕ್ಷರು ಹನುಮೂರ್ತಿ ಮಾತನಾಡಿ ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು, ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು ಎಂದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಸುಮಾರು 30 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷರು ಸಿ ಹನುಮಮೂರ್ತಿ, ಉಪಾಧ್ಯಕ್ಷರು ಹನುಮಂತರಾಯಪ್ಪ, ದಲಿತ ಸೇನೆ ಜಿಲ್ಲಾಧ್ಯಕ್ಷರು ಅನಂತಕುಮಾರ್, ತಾಲ್ಲೂಕು ಪ. ಧ್ವನಿ ತಾಲ್ಲೂಕು ಅಧ್ಯಕ್ಷರು ಸುರೇಶ್, ಪ್ರಧಾನ ಕಾರ್ಯದರ್ಶಿ ಹೊನ್ನೇಶ್, ಕಾರ್ಯದರ್ಶಿ ಪುಟ್ಟರಾಜು, ಕೆಂಪನರಸಿಂಹಯೃ ಹೊಸಕೋಟೆ ಹನುಮಂತರಾಜು, ಸುರೇಂದ್ರ, ದೇವರಾಜು ಇನ್ನಿತರ ಸಮುದಾಯದ ಬಂದುಗಳು ತಾಲ್ಲೂಕು ಆಡಳಿತದ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ನರಸಿಂಹಯ್ಯ ಹೊಸಕೋಟೆ
