ರಾಮನಾಥಪುರ, ನ. 12: ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೂ ಖಾಸಗಿ ಶಾಲೆಗಳಿಗೆ ಸರಿಸಾಟಿಯಾದ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಆರ್ಥಿಕವಾಗಿ ಹಿಂದುಳಿದ ರೈತ ಕುಟುಂಬಗಳ ಮಕ್ಕಳು ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣದ ಅಡಿಪಾಯ ಹೊಂದಬೇಕು ಎಂಬ ಸಂಕಲ್ಪದೊಂದಿಗೆ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ತಾರಾ ಎ. ಮಂಜು ಅವರು ಅರಕಲಗೂಡು ತಾಲ್ಲೂಕಿನ ನೂರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ತಮ್ಮ ಪ್ರಯತ್ನ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮರ್ಪಿತ ತಂಡದ ಸಹಕಾರದೊಂದಿಗೆ ಆರಂಭವಾದ ಮಕ್ಕಳ ಮನೆ ಯೋಜನೆ ಇಂದು 20 ಕೇಂದ್ರಗಳವರೆಗೆ ವಿಸ್ತರಿಸಿದ್ದು, 500ಕ್ಕೂ ಹೆಚ್ಚು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆ. ಈ ಶೈಕ್ಷಣಿಕ ಸೇವೆ ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕುಟುಂಬದ ಜವಾಬ್ದಾರಿಯ ನಡುವೆಯೂ ಸಮಾಜದ ಮಕ್ಕಳ ಭವಿಷ್ಯಕ್ಕೆ ಆದ್ಯತೆ!
ತಮ್ಮ ಕುಟುಂಬದ ಜವಾಬ್ದಾರಿಗಳ ನಡುವೆಯೂ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಸಮಯ ಮೀಸಲಿಡುತ್ತಿರುವ ತಾರಾ ಎ. ಮಂಜು ಅವರ ಕಾರ್ಯ ವಿಶೇಷವಾಗಿದೆ. ಪತಿ ಹಾಗೂ ಮಗನನ್ನು ಶಾಸಕರಾಗಿ, ಮಗಳು ಮತ್ತು ಅಳಿಯನನ್ನು ವೈದ್ಯರಾಗಿ, ಸೊಸೆಯನ್ನು ಉದ್ಯಮಿಯಾಗಿ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಅವರು, ಕುಟುಂಬದ ಸಂತಸದ ಕ್ಷಣಗಳ ನಡುವೆಯೂ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ತಮ್ಮ ಕುಟುಂಬದ ಮಕ್ಕಳಿಗೆ ದೊರೆಯುವಂತಹ ಉತ್ತಮ ಶಿಕ್ಷಣ ಮತ್ತು ಅವಕಾಶಗಳು ಗ್ರಾಮೀಣ ಭಾಗದ ಬಡ ರೈತ ಕುಟುಂಬಗಳ ಮಕ್ಕಳಿಗೂ ದೊರೆಯಬೇಕು ಎಂಬ ವಿಶಾಲ ಮನೋಭಾವವೇ ಮಕ್ಕಳ ಮನೆ ಯೋಜನೆಗೆ ಬೆನ್ನೆಲುಬಾಗಿದೆ.
ಶಿಕ್ಷಣ ಎನ್ನುವುದು ಕೇವಲ ಆರ್ಥಿಕವಾಗಿ ಸಬಲರಾದವರ ಸ್ವತ್ತಾಗಬಾರದು. ಹಳ್ಳಿಯ ಬಡ ಮಕ್ಕಳಿಗೂ ಉತ್ತಮ ಶಿಕ್ಷಣದ ಮೂಲಕ ದೊಡ್ಡ ಕನಸು ಕಾಣುವ ಹಾಗೂ ಅವುಗಳನ್ನು ನನಸಾಗಿಸಿಕೊಳ್ಳುವ ಅವಕಾಶ ಸಿಗಬೇಕು ಎಂಬ ಆಶಯ ಈ ಸೇವೆಯ ಹಿಂದಿದೆ.

ಹಿರಿಯ ವಿದ್ಯಾರ್ಥಿಗಳ ತಂಡವೇ ಶೈಕ್ಷಣಿಕ ಅಭಿಯಾನದ ಬೆನ್ನೆಲುಬು!
ಈ ಶೈಕ್ಷಣಿಕ ಅಭಿಯಾನದ ಯಶಸ್ಸಿನ ಹಿಂದೆ ಹಿರಿಯ ವಿದ್ಯಾರ್ಥಿಗಳ ಸಂಘದ ಸಮರ್ಪಿತ ತಂಡದ ಪರಿಶ್ರಮವೂ ಮಹತ್ವದ್ದಾಗಿದೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ತಂಡವು ಮಕ್ಕಳ ಮನೆಗಳ ನಿರ್ವಹಣೆ, ಶಿಕ್ಷಕಿಯರಿಗೆ ತರಬೇತಿ, ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ತಾರಾ ಎ. ಮಂಜು ಅವರ ಮಾರ್ಗದರ್ಶನ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘಟಿತ ಪ್ರಯತ್ನದಿಂದಾಗಿ 20 ಮಕ್ಕಳ ಮನೆಗಳ ಮೂಲಕ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಮಹತ್ವದ ಕಾರ್ಯ ಸಾಕಾರಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸಂಕಲ್ಪವನ್ನೂ ಅವರು ಹೊಂದಿದ್ದಾರೆ.
ಅರಕಲಗೂಡಿನ ನೂರಾರು ಮಕ್ಕಳ ಪಾಲಿನ ಅಮ್ಮನಾದ ತಾರಮ್ಮ!
ಒಂದು ಕುಟುಂಬದ ಮಕ್ಕಳ ಭವಿಷ್ಯ ರೂಪಿಸುವುದರ ಜೊತೆಗೆ ನೂರಾರು ಗ್ರಾಮೀಣ ಮಕ್ಕಳ ಬದುಕಿನಲ್ಲೂ ಶಿಕ್ಷಣದ ಬೆಳಕು ಮೂಡಿಸುತ್ತಿರುವ ತಾರಾ ಎ. ಮಂಜು ಅವರ ಶೈಕ್ಷಣಿಕ ಕಾಳಜಿ ಅಭಿನಂದನಾರ್ಹವಾಗಿದೆ.
ಹುದ್ದೆ, ಅಧಿಕಾರ ಹಾಗೂ ಕುಟುಂಬದ ಸಾಧನೆಗಳಾಚೆಗೆ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಸಮಯ ಮತ್ತು ಶ್ರಮವನ್ನು ವಿನಿಯೋಗಿಸುತ್ತಿರುವ ಅವರ ಸೇವಾ ಮನೋಭಾವ ಅರಕಲಗೂಡು ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೆ ಹೊಸ ಭರವಸೆಯಾಗಿದೆ.
ಒಬ್ಬರ ಕನಸು, ಹಲವರ ಪರಿಶ್ರಮ ಹಾಗೂ ನೂರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿರುವ ಈ ಮಕ್ಕಳ ಮನೆಗಳ ಶೈಕ್ಷಣಿಕ ಪ್ರಯತ್ನ ನಿಜಕ್ಕೂ ಮಾದರಿಯಾಗಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
