ಕೆ.ಆರ್.ಪೇಟೆ,ಫೆ.04: ಪ್ರಪಂಚದಲ್ಲಿ ಹಿಂದೂ ಸಮುದಾಯಕ್ಕೆ ಇರುವುದೊಂದೇ ನಮ್ಮ ಭಾರತ ದೇಶ. ಇದನ್ನು ಸಂರಕ್ಷಣೆ ಮಾಡಿಕೊಳ್ಳುವುದು ಹಿಂದೂಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಇದಕ್ಕಾಗಿ ನಾವು ಜಾತಿ ಬೇದಗಳನ್ನು ಬದಿಗೊತ್ತಿ ಒಂದಾಗುವ ತುರ್ತು ಅಗತ್ಯವಿದೆ ಎಂದು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ(ಆರ್.ಎಸ್.ಎಸ್) 100ನೇ ವರ್ಷಾಚರಣೆ ಅಂಗವಾಗಿ ಪಟ್ಟಣದ ಕೆರೆ ಬೀದಿಯಲ್ಲಿರುವ ಶ್ರೀ ಮೂಡಲ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆಗೆ ಚಾಲನೆ ನೀಡಿ, ನಂತರ ಪುರಸಭಾ ಕಚೇರಿಯ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಹಿಂದೂಗಳು ಸಹಿಷ್ಣುಗಳು, ಸರ್ವ ಧರ್ಮದವರನ್ನು ನಮ್ಮವರೆಂದು ಕಾಣುವ ವಿಶಾಲ ಹೃದಯವಂತರು ಆದರೆ ಈ ಸಹಿಷ್ಣು ಭಾವನೆಯೇ ಹಿಂದೂಗಳಿಗೆ ನಮ್ಮದೇ ಆದ ಭಾರತ ದೇಶದಲ್ಲಿ ರಕ್ಷಣೆಯನ್ನು ನಾವೇ ಮಾಡಿಕೊಳ್ಳಲು ಸಂಘಟಿತವಾಗಬೇಕಾದ ಅಗತ್ಯವಿದೆ. ಜೊತೆಗೆ ಜಾಗೃತರಾಗಬೇಕಾದ ಅಗತ್ಯವಿದೆ. ಹಿಂದೂಗಳು ಅಲ್ಪ ಸಂಖ್ಯಾತರಾಗಿರುವ ರಾಜ್ಯಗಳಲ್ಲಿ ಹಿಂದೂಗಳು ನೆಮ್ಮದಿಯನ್ನು ಕಳೆದುಕೊಂಡು ನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಾಗಿದೆ. ಆದರೆ ಹಿಂದೂಗಳು ಹೆಚ್ಚಿರುವ ರಾಜ್ಯಗಳಲ್ಲಿ ಹಿಂದೂಯೇತರ ಸಮುದಾಯಗಳು ಬಹಳ ನೆಮ್ಮದಿಯ ಜೀವನ ನಡೆಸುತ್ತಿವೆ. ನಮ್ಮಿಂದ ಯಾರಿಗೂ ಯಾವತ್ತೂ ತೊಂದರೆಯಾಗುವುದಿಲ್ಲ. ಆದರೆ ನಾವು ಅಲ್ಪ ಸಂಖ್ಯಾತರಾಗುವವರೆವಿಗೂ ನಮಗೆ ಹಾಗೂ ಬೇರೆ ಯಾರಿಗೂ ತೊಂದರೆಯಾಗುವುದಿಲ್ಲ. ಒಂದೊಮ್ಮೆ ನಾವು ಅಲ್ಪಸಂಖ್ಯಾತರಾದ ವೇಳೆ ನಮ್ಮನ್ನು ರಕ್ಷಿಸಲು ಯಾರು ಬರುತ್ತಾರೆ ಎಂಬುದು ನಮಗೆ ಆತಂಕಕಾರಿಯಾದ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ, ಕಾಶ್ಮೀರದಲ್ಲಿ ಕೇರಳದಲ್ಲಿ ವಾಸಿಸುವ ಹಿಂದೂಗಳ ಪರಿಸ್ಥಿತಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ. ಇದನ್ನು ಪ್ರಶ್ನಿಸುವ ಹಿಂದೂಗಳನ್ನು ಇವರು ಕೋಮುವಾದಿಗಳು ಎಂದು ಬಿಂಬಿಸುವ ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದೆ. ಹಾಗಾಗಿ ನಾವು ನಮ್ಮ ಹಿಂದೂಗಳು ಸಂಘಟಿತರಾಗಬೇಕು. ಜಾಗೃತರಾಗಬೇಕು. ನಮ್ಮ ಧರ್ಮವನ್ನು ಬಿಂಬಿಸುವ ತಿಲಕವನ್ನು ಹಣೆಗೆ ಹಾಕಬೇಕು. ನಿತ್ಯ ದೇವಾಲಯಗಳಿಗೆ ಹೋಗುವ ಅಭ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ಹಿಂದೂಗಳ ರಕ್ಷಣೆಗಾಗಿ 100ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಕಾರ್ಯನಿರ್ವಹಿಸುತ್ತಿರುವ ಇರುವ ಏಕೈಕ ಸಂಘಟನೆ ಆರ್.ಎಸ್.ಎಸ್. ಸಂಘಟನೆಯಾಗಿದೆ. ಹಾಗಾಗಿ ಎಲ್ಲಾ ಹಿಂದೂಗಳು ಆರ್.ಎಸ್.ಎಸ್. ಸೇರುವ ಮೂಲಕ ಜಾಗೃತರಾಗಬೇಕು. ಆರ್.ಎಸ್.ಎಸ್.ನಲ್ಲಿ ಎಲ್ಲಾ ಜಾತಿಯ ಜನರಿದ್ದಾರೆ. ಹಾಗಾಗಿ ಸುಮಾರು 100ವರ್ಷಗಳು ಕಳೆದರೂ ಆರ್.ಎಸ್.ಎಸ್. ತನ್ನ ಸಾಮಾಜಿಕ ಚಟುವಟಿಕೆ, ಧರ್ಮ ರಕ್ಷಣೆ, ವಿಪತ್ತುಗಳಲ್ಲಿ ಪರಿಹಾರ ಕಾರ್ಯಕ್ರಮ, ಧರ್ಮ ಜಾಗೃತಿ ಮೂಡಿಸಿ, ದೇಶಭಕ್ತಿ ಮೂಡಿ ಹಿಂದೂಗಳಿಗಾಗಿ ಇರುವ ಭಾರತ ದೇಶವನ್ನು ಸಂರಕ್ಷಣೆ ಮಾಡಿಕೊಳ್ಳಲು ಹಿಂದೂಗಳೆಲ್ಲರನ್ನೂ ಹಿಂದೂ ಸಮಾಜೋತ್ಸವಗಳ ಮೂಲಕ ಜಾಗೃತಿಗೊಳಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ಹೇಳಿದರು.

ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಮಹೇಶ್ ಕಡಗದಾಳು ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿ ಹಿಂದೂಗಳು ಏಕೆ ಜಾಗೃತರಾಗಬೇಕು. ಏಕೆ ಸಂಘಟಿತರಾಗಬೇಕು. ಇಲ್ಲದಿದ್ದರೆ ಯಾವ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹಲವು ನಿದರ್ಶನಗಳೊಂದಿಗೆ ತಿಳಿಸಿಕೊಟ್ಟರು.
ಬೆಡದಹಳ್ಳಿ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿಸ್ವಾಮೀಜಿ, ಹಿರಿಯ ಮುಖಂಡ ಬಿ.ನಂಜಪ್ಪ, ಆರ್.ಎಸ್.ಎಸ್. ಜಿಲ್ಲಾ ಪ್ರಮುಖ್ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಆರ್.ಎಸ್.ಎಸ್ ಮಾಧ್ಯಮ ಪ್ರಮುಖ್ ಕೆ.ಕಾಳೇಗೌಡ, ಮಧುಸೂಧನ್ ಇತರರು ವೇದಿಕೆಯಲ್ಲಿದ್ದರು.

ಶೋಭಾಯಾತ್ರೆಯಲ್ಲಿ ಮಾಜಿ ಸಚಿವ ನಾರಾಯಣಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಮೂಡಾ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮನ್ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾ.ಪಂ.ಅಧ್ಯಕ್ಷ ಜಾನಕೀರಾಂ, ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ಶಿವಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಆರ್.ಲೋಕೇಶ್, ಕೆ.ಬಿ.ನಂದೀಶ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಸುನಿಲ್, ಮುಖಂಡರಾದ ಹಂಸ ರಮೇಶ್, ಮೈಲಾರಿ ರವಿ, ಸಾರಂಗಿ ನಾಗಣ್ಣ, ಶೀಳನೆರೆ ಭರತ್, ಚೋಜನಹಳ್ಳಿ ಪ್ರಕಾಶ್, ಅಂಜನೀಗೌಡ, ಪಾರ್ಲೇಜಿ ರಾಜೇಶ್, ಭಾರತೀಪುರ ಪುಟ್ಟಣ್ಣ, ಬೇಕರಿ ದಿನೇಶ್, ಮೈಸೂರು ಕೆ.ಚಂದ್ರಶೇಖರ್, ರಘುರಾಂ ನಾಡಿಗ್, ಪೂಜಾರಿ ಬಸವರಾಜು, ಎ.ಜಿ.ಪರಮೇಶ್, ಹರೀನಹಳ್ಳಿ ಪೂಜಾರಿ ಯಾಲಜ್ಕಯ್ಯ, ಅನಿಲ್, ಮತ್ತಿತರರು ಭಾಗವಹಿಸಿದ್ದರು.
ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ, ಅಲಂಕೃತಗೊಂಡ ಎತ್ತಿನ ಗಾಡಿಗಳಲ್ಲಿ ಗಣ್ಯರ ಭಾವಚಿತ್ರ ಮೆರವಣಿಗೆ, ನಾಟಿ ಗೋವುಗಳ ಮೆರವಣಿಗೆ,ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆಯು ಶೋಭಾಯಾತ್ರೆಗೆ ವಿಶೇಷ ಮೆರಗು ತಂದಿತ್ತು. ಮಂಡ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಯ್ಯ, ಡಿವೈಎಸ್ಪಿ ಚೆಲುವರಾಜು, ಸಿಪಿಐ ಸುಮಾರಾಣಿ, ಆನಂದೇಗೌಡ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ(ಆರ್.ಎಸ್.ಎಸ್) 100ನೇ ವರ್ಷಾಚರಣೆ ಅಂಗವಾಗಿ ಪಟ್ಟಣದ ಕೆರೆ ಬೀದಿಯಲ್ಲಿರುವ ಶ್ರೀ ಮೂಡಲ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆಗೆ ಚಾಲನೆ ನೀಡಿ, ನಂತರ ಪುರಸಭಾ ಕಚೇರಿಯ ಮೈದಾನದಲ್ಲಿ ನಡೆದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
