ಕೆ.ಆರ್.ಪೇಟೆ,ಫೆ.09: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಸಾಧನೆ ಮಾಡಬೇಕು ಎಂದು ತುಮಕೂರು ಜಿಲ್ಲೆಯ ಗುಬ್ಬಿಯ ಬಂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಕ್ಷಣ ತಜ್ಞ ಡಾ.ಜಿ.ಬಿ.ಮಲ್ಲಪ್ಪ ಹೇಳಿದರು.
ಅವರು ಪಟ್ಟಣದ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಸಾಧಕರ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲವಾದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಫೋನ್ ಫೇಸ್ ಬುಕ್ ವ್ಯಾಟ್ಸಪ್ ಎಂದು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ ಸರ್ವ ಶ್ರೇಷ್ಠ ಸಾಧನೆ ಮಾಡಬೇಕು ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯು ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಸಿಗುವ ಸಾಧನವಾದ್ದರಿಂದ ವಿದ್ಯಾರ್ಥಿಗಳ ಗಮನ ಏಕಾಗ್ರತೆಯ ಕಲಿಕೆಯತ್ತ ಇರಬೇಕು ಎಂದು ಮನವಿ ಮಾಡಿದರಲ್ಲದೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಇಂದಿನಿಂದಲೇ ದಿನಕ್ಕೆ ಕನಿಷ್ಠ ಮೂರ್ನಾಲ್ಕು ಗಂಟೆ ಅಭ್ಯಾಸ ಮಾಡಿದರೆ ಸಾಕು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಅವಕಾಶವಿದೆ.

ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗೆ ಕೀರ್ತಿಯನ್ನು ತರುವ ವಿದ್ಯಾರ್ಥಿಗಳಾಗಿ ಹೊರಹೊಮ್ಮುವ ಮೂಲಕ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ವಕೀಲ ಗಂಜಿಗೆರೆ ಜಿ.ಜೆ.ಲೋಕೇಶ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಕಷ್ಟಪಟ್ಟು ವ್ಯಾಸಂಗ ಮಾಡಿದ್ದರಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸುವ ಜೊತೆಗೆ ವಕೀಲನಾಗಿ ನಾಲ್ಕಾರು ಜನರಿಗೆ ಸಹಾಯ ಮಾಡುವ ಶಕ್ತಿ ಬಂದಿದೆ. ನಾನು ಈ ಸಾಧನೆ ಮಾಡಲು ನನ್ನ ತಂದೆ ತಾಯಿಗಳು ಹಾಗೂ ನನಗೆ ಶಿಕ್ಷಣ ನೀಡಿದ ಗುರುಗಳು ಕಾರಣರಾಗಿದ್ದಾರೆ ಎಂದು ಭಾವುಕರಾದರು.
ತುಮಕೂರಿನ ಬಂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಯ್ಯ ಉಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ವಕೀಲ ಗಂಜಿಗೆರೆ ಜಿ.ಜೆ.ಲೋಕೇಶ್ ವಿಶ್ರಾಂತ ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ತರಬೇತುದಾರರಾದ ಟಿ.ಸಿ.ಬಸವಯ್ಯ, ಪುರಸಭಾ ಮಾಜಿ ಸದಸ್ಯ ನಂದೀಶ್, ಸಮಾಜ ಸೇವಕ ಬಸವಗೌಡ, ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಆಡಳಿತ ಅಧಿಕಾರಿ ಎಸ್.ಬಿ.ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸರ್ವ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
–ಶ್ರೀನಿವಾಸ್ ಆರ್.
