ಕೆ.ಆರ್.ಪೇಟೆ, ನ.4: ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಭವನ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಮಹಾಸಭಾ ವತಿಯಿಂದ ಆರ್ಥಿಕ ನೆರವು ಒದಗಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು.
ಪಟ್ಟಣದ ಬಸವೇಶ್ವರನಗರದಲ್ಲಿ ಆಯೋಜಿಸಿದ್ದ ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಕಚೇರಿ ಉದ್ಘಾಟಿಸಿ, ತಾಲೂಕು ಜನತೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೆ.ಆರ್.ಪೇಟೆ ಪಟ್ಟಣದ ಹೃದಯಭಾಗದಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ 26 ಗುಂಟೆ ಜಮೀನು ಹೊಂದಿರುವುದು ಶ್ಲಾಘನೀಯ. ಈ ಎರಡೂ ಕಟ್ಟಡಗಳ ನಿರ್ಮಾಣಕ್ಕೆ ಇದೇ ತಾಲೂಕಿನವರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ₹3 ಕೋಟಿ ಅನುದಾನ ನೀಡಿದ್ದಾರೆ. ಇದರ ಜೊತೆಗೆ ಸರ್ಕಾರದ ವತಿಯಿಂದಲೂ ಹೆಚ್ಚಿನ ಅನುದಾನ ಒದಗಿಸಿ, ಶೀಘ್ರದಲ್ಲೇ ಬೃಹತ್ ಭವನ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.

ಇಂದು ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಅಮೂಲ್ಯವಾದ ಜಮೀನು ಕಬಳಿಸುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿವೆ. ಸಮಾಜಕ್ಕೆ ದಾನವಾಗಿ ನೀಡಿರುವ ಭೂಮಿಯನ್ನು ರಕ್ಷಿಸಲು ಶ್ರಮಿಸಿದ ಎಲ್ಲರಿಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಎಲ್ಲರನ್ನೂ ಅಪ್ಪಿ, ಒಪ್ಪಿಕೊಂಡು ಮುನ್ನಡೆಯುವ ಸಮಾಜ ನಮ್ಮದು
ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯದ ಸಂದೇಶ ನೀಡಿದ ಹೆಗ್ಗಳಿಕೆ ಲಿಂಗಾಯತ ಸಮುದಾಯಕ್ಕಿದೆ. ‘ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶ ಸಾರಿದ ರೇಣುಕಾದಿ ಆಚಾರ್ಯರ ಭವ್ಯ ಪರಂಪರೆ ನಮ್ಮದಾಗಿದೆ. ಎಲ್ಲರನ್ನೂ ಒಪ್ಪಿಕೊಂಡು, ಅಪ್ಪಿಕೊಂಡು ಮುನ್ನಡೆಯುವ ಸಮಾಜ ನಮ್ಮದು ಎಂದು ಈಶ್ವರ ಖಂಡ್ರೆ ಹೇಳಿದರು.
ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ನಮ್ಮ ಸರ್ಕಾರದ ಮುಖ್ಯ ಆದ್ಯತೆ ಅಭಿವೃದ್ಧಿಯಾಗಿದ್ದು, ಈ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ ಎಂದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ಮಹಾಸಭಾದ ಅಧ್ಯಕ್ಷರಾಗಿ ಸಮಾಜವನ್ನು ಸಂಘಟಿಸಿದ್ದರು. ಅವರು ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಈಶ್ವರ ಬಿ. ಖಂಡ್ರೆ ಅವರ ಕುಟುಂಬ ಸದಾ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವೇಶ್ವರ ವೃತ್ತ ಹಾಗೂ ರಸ್ತೆಗೆ ‘ಬಸವ ಮಾರ್ಗ’ ಎಂದು ಹೆಸರಿಡಲು ಸಹಕರಿಸಬೇಕು. ಜೊತೆಗೆ ನಿಗದಿತ ಜಾಗದಲ್ಲಿ ಬಸವೇಶ್ವರ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಬೇಕು ಎಂದು ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಎಚ್.ಟಿ. ಮಂಜು ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅಗತ್ಯ ಅನುದಾನ ಒದಗಿಸಬೇಕು. ಸರ್ಕಾರಿ ಗೋಮಾಳದಲ್ಲಿ 20 ವರ್ಷಗಳಿಗೂ ಹಿಂದೆ ಮನೆ ನಿರ್ಮಿಸಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಶೇಷ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಮಂಡ್ಯ ಜಿಲ್ಲಾ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಆನಂದ್, ತಾಲೂಕು ಘಟಕದ ಅಧ್ಯಕ್ಷ ಸುಜೇಂದ್ರ ಕುಮಾರ್, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್, ಆರ್ಟಿಒ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್. ದೇವರಾಜು, ಮನ್ಮುಲ್ ನಿರ್ದೇಶಕರಾದ ಡಾಲು ರವಿ ಮತ್ತು ಎಂ.ಬಿ. ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಂಬರೀಶ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶೇಷಾಧಿಕಾರಿ ಸಿಂಧುಘಟ್ಟ ಅರವಿಂದ್, ಕೆ.ಯು.ಐ.ಡಿ.ಎಫ್.ಸಿ. ನಿಗಮದ ಅಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
