ಕೊರಟಗೆರೆ: ಒನಕೆ ಓಬವ್ವ ಜಯಂತಿ ಆಚರಣೆಯ ಅಂಗವಾಗಿ ತಾಲೂಕು ಆಡಳಿತದಿಂದ ಪೂರ್ವಭಾವಿ ಸಭೆಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ತಹಶೀಲ್ದಾರ್ ಶರತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ್ ಶರತ್ ಕುಮಾರ್, ಒನಕೆ ಓಬವ್ವ ಅವರು ಸ್ತ್ರೀ ಸಬಲೀಕರಣದ ಶಕ್ತಿಯ ಪ್ರತೀಕವಾಗಿದ್ದಾರೆ. ಪುರುಷರ ಸಾಧನೆಯ ಹಿಂದೆ ಮಹಿಳೆಯರ ಶಕ್ತಿಯೂ ಇರುತ್ತದೆ ಎಂಬುದಕ್ಕೆ ಓಬವ್ವ ಅವರ ಜೀವನವೇ ಸಾಕ್ಷಿ. ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಗಳನ್ನು ಎದುರಿಸಿದ ಅವರ ಧೈರ್ಯ ಮತ್ತು ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದರು.
ಮಹಿಳೆಯರು ಸ್ವಾವಲಂಬಿಗಳಾಗಬೇಕು. ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜತೆಗೆ, ಆಂತರಿಕವಾಗಿ ಬದಲಾವಣೆಗೆ ಮುಂದಾಗಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಛಲವಾದಿ ಸಮುದಾಯದ ಮುಖಂಡ ಹನುಮಮೂರ್ತಿ, ಒನಕೆ ಓಬವ್ವ ಅವರ ಇತಿಹಾಸ ಮತ್ತು ಸಾಹಸಗಾಥೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಕೆ.ಎಸ್., ಜೋಶ್ನಾ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಕಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಛಲವಾದಿ ಮಹಾಸಭೆಯ ನಿರ್ದೇಶಕರು, ಸಮುದಾಯದ ಮುಖಂಡರು, ಪತ್ರಕರ್ತರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
