ಬೆಂಗಳೂರು: ರಾಜ್ಯದ ಹೆಮ್ಮೆಯ ಹಾಲು ಉತ್ಪನ್ನಗಳ ಬ್ರ್ಯಾಂಡ್ ‘ನಂದಿನಿ’ಗೆ ನೂತನ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಬಮೂಲ್ ವತಿಯಿಂದ ಸುಧಾರಾಣಿ ಅವರನ್ನು ಅಧಿಕೃತವಾಗಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಲಾಗಿದ್ದು, “ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಸುಧಾರಾಣಿ ಅವರನ್ನು ಬಮೂಲ್ ಕುಟುಂಬಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇವೆ” ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಟಿ ಸುಧಾರಾಣಿ, “ಗೌರವ, ಧನ್ಯತೆ ಮತ್ತು ಕೃತಜ್ಞತೆ ಮನಸ್ಸು ತುಂಬಿದೆ. ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕವಾಗಿರುವ ನಂದಿನಿ ಬ್ರ್ಯಾಂಡ್ ಜೊತೆ ಕೈಜೋಡಿಸುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಹೆಮ್ಮೆಯ ಜವಾಬ್ದಾರಿ,” ಎಂದು ತಿಳಿಸಿದ್ದಾರೆ.
ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಸಂಸ್ಥೆಯ ಹೊಸ ಉತ್ಪನ್ನಗಳು ಮತ್ತು ಮಾರುಕಟ್ಟೆ ಕಾರ್ಯತಂತ್ರವನ್ನು ಮುನ್ನಡೆಸುತ್ತಿರುವ ಮನೋಹರ್ ಐಯರ್ ಅವರೊಂದಿಗೆ ನಡೆದ ಸಂವಾದ ಪ್ರೇರಣಾದಾಯಕವಾಗಿತ್ತು ಎಂದು ಅವರು ಹೇಳಿದ್ದಾರೆ.
ದೇಸಿ ಹಸುಗಳ ಸಂರಕ್ಷಣೆ, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದು ಬಮೂಲ್ನ ಮುಖ್ಯ ಉದ್ದೇಶವಾಗಿದ್ದು, ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ.
“ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳನ್ನು ಒಳಗೊಂಡ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆ,” ಎಂದು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
