ನವದೆಹಲಿ: 2014 ರಿಂದ 2026 ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳನ್ನು ಭಾರತದ ಆಂತರಿಕ ಭದ್ರತೆಗೆ “ಸುವರ್ಣ ಯುಗ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು. ದೇಶದ ಪ್ರಮುಖ ಸಂಘರ್ಷ ಪ್ರದೇಶಗಳಲ್ಲಿ ಹಿಂಸಾಚಾರವನ್ನು ಗಣನೀಯವಾಗಿ ನಿಗ್ರಹಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ರಾಜಧಾನಿ ನವದೆಹಲಿಯಲ್ಲಿ ನಡೆದ ದೆಹಲಿ ಪೊಲೀಸ್ 79ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 2014ರ ಮೊದಲು ಕಾಶ್ಮೀರ, ಈಶಾನ್ಯ ಪ್ರದೇಶಗಳು ಹಾಗೂ ಸುಮಾರು 11 ರಾಜ್ಯಗಳಿಗೆ ವ್ಯಾಪಿಸಿದ ಮಾವೋವಾದಿ ಪೀಡಿತ ಪ್ರದೇಶಗಳು ಆಂತರಿಕ ಭದ್ರತೆಗೆ ಗಂಭೀರ ಸವಾಲಾಗಿದ್ದವು ಎಂದು ಹೇಳಿದರು.
ವಿಶೇಷವಾಗಿ ಜಮ್ಮು–ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಪರಿಸ್ಥಿತಿ ಬದಲಾಗಿದ್ದು, ಕಾಶ್ಮೀರ, ಈಶಾನ್ಯ ಮತ್ತು ಮಾವೋವಾದಿ ಪ್ರದೇಶಗಳಲ್ಲಿ ಹಿಂಸಾಚಾರವನ್ನು ಶೇ.80ರಷ್ಟು ಕಡಿಮೆ ಮಾಡುವಲ್ಲಿ ದೇಶ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಹಿಂಸಾಚಾರ ಸಂಪೂರ್ಣವಾಗಿ ನಿರ್ಮೂಲವಾಗುವ ದಿನ ದೂರವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವರು ವಿಧ್ಯುಕ್ತ ಪಥಸಂಚಲನವನ್ನು ಪರಿಶೀಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪದಕಗಳನ್ನು ಪ್ರದಾನ ಮಾಡಿದರು. ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಪೊಲೀಸರ ಸಮರ್ಪಣೆ ಹಾಗೂ ಪಾತ್ರವನ್ನು ಶ್ಲಾಘಿಸಿದರು.
ಸಂಭ್ರಮಾಚರಣೆಯಲ್ಲಿ ಅತ್ಯುತ್ತಮ ಮೆರವಣಿಗೆ ತುಕಡಿ, ಸ್ವಾಟ್ ತಂಡ, ಶ್ವಾನ ದಳ, ಬ್ಯಾಂಡ್ ಘಟಕ, ಮೋಟಾರ್ ಸೈಕಲ್ ಸವಾರರು, ಪಿಸಿಆರ್ ಘಟಕಗಳು ಸೇರಿದಂತೆ ಹಲವು ವಿಶೇಷ ಘಟಕಗಳ ಪ್ರದರ್ಶನ ಗಮನಸೆಳೆಯಿತು.
ರಾಜಧಾನಿಯಲ್ಲಿ ಪೊಲೀಸ್ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹಲವು ಹೊಸ ಉಪಕ್ರಮಗಳನ್ನು ಘೋಷಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದರು.
