ದಾವಣಗೆರೆ: ಪಶ್ಚಿಮ ಆಫ್ರಿಕಾ ದೇಶವಾದ ಘಾನಾದ ತುಮು ಪಟ್ಟಣದಲ್ಲಿ ನೋಂದಾಯಿಸದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ 26 ಭಾರತೀಯರನ್ನು ಸ್ಥಳೀಯ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ನಂತರ ಘಾನಾದ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಸಮುದಾಯದ ಇನ್ನೂ 250ಕ್ಕೂ ಹೆಚ್ಚು ಮಂದಿ ಬಂಧನ ಭೀತಿಯಲ್ಲಿ ಇರುವುದಾಗಿ ತಿಳಿದುಬಂದಿದೆ.
ಬಂಧಿತರು ಕಳೆದ ವರ್ಷ ವ್ಯಾಪಾರ ವೀಸಾದಡಿ ಆಫ್ರಿಕಾ ದೇಶಕ್ಕೆ ತೆರಳಿ ಗಿಡಮೂಲಿಕೆ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಕರ್ನಾಟಕ ಹಕ್ಕಿ ಪಿಕ್ಕಿ ಸಮುದಾಯ ಸಂಘದ ಅಧ್ಯಕ್ಷ ಪುನೀತ್ ಮಾಹಿತಿ ನೀಡುತ್ತಾ, “ಎರಡು ದಿನಗಳ ಹಿಂದೆ 26 ಮಂದಿಯನ್ನು ಬಂಧಿಸಿರುವ ವಿಚಾರವನ್ನು ಘಾನಾದಲ್ಲಿರುವ ಸಮುದಾಯದ ಸದಸ್ಯರು ದೂರವಾಣಿ ಮೂಲಕ ತಿಳಿಸಿದ್ದಾರೆ. ಈ ಕುರಿತು ನಾನು ಘಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಅವರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.
ಬಂಧಿತರಲ್ಲಿ ಬಹುತೇಕರು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳವರು ಎಂದು ತಿಳಿದು ಬಂದಿದೆ. ಸ್ಥಳೀಯ ನಿವಾಸಿಯೊಬ್ಬರು ವಿದೇಶಿಯರು ಅನುಮಾನಾಸ್ಪದ ಔಷಧೀಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿತು.
ಮೊದಲಿಗೆ ನಾಲ್ವರನ್ನು ಬಂಧಿಸಿದ ಪೊಲೀಸರು, ನಂತರ ಘಾನಾ ಆಹಾರ ಮತ್ತು ಔಷಧ ಪ್ರಾಧಿಕಾರದ ಸಹಯೋಗದೊಂದಿಗೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಒಟ್ಟು 26 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ವಾಸಸ್ಥಳಗಳಲ್ಲಿ ನಡೆಸಿದ ಶೋಧದಲ್ಲಿ ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾದ ನೋಂದಾಯಿಸದ ಗಿಡಮೂಲಿಕೆ ಉತ್ಪನ್ನಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ 21 ಮಂದಿ ಕೆಲಸದ ಪರವಾನಗಿ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದು, ಐದು ಮಂದಿಗೆ ಯಾವುದೇ ಮಾನ್ಯ ದಾಖಲೆಗಳಿಲ್ಲ ಎಂದು ತಿಳಿದುಬಂದಿದೆ. ಬಂಧಿತರಲ್ಲಿ 12 ಮಹಿಳೆಯರು ಹಾಗೂ 14 ಪುರುಷರು ಇದ್ದು, ಕೆಲವರು ದಂಪತಿಗಳಾಗಿ ಘಾನಾಕ್ಕೆ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಉದ್ಯೋಗ ಹಾಗೂ ವ್ಯಾಪಾರಕ್ಕಾಗಿ ತೆರಳಿರುವ ಸಮುದಾಯದ ಸದಸ್ಯರ ಸುರಕ್ಷತೆ ಬಗ್ಗೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
