ಕೆ.ಆರ್.ಪೇಟೆ,ಫೆ.19: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಆರಂಭಿಸಲಾಗಿರುವ “ಕೂಸಿನಮನೆ” ಮಕ್ಕಳಿಗೆ ಸಮವಸ್ತ್ರವನ್ನು ಶಾಸಕ ಹೆಚ್.ಟಿ.ಮಂಜು ವಿತರಣೆ ಮಾಡಿದರು.
ಬಳಿಕ ಮತನಾಡಿದ ಶಾಸಕರು ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ಕಾರ್ಡ್ ಮಾಡಿಸಿಕೊಂಡು ಉದ್ಯೋಗ ಮಾಡಲು ಹೋಗುವ ಕಾರ್ಮಿಕರ ಮಕ್ಕಳನ್ನು ಪೋಷಣೆ ಮಾಡುವ ಉದ್ದೇಶದಿಂದ ಆರಂಭಿಸಲಾಗಿರುವ 21 “ಕೂಸಿನ ಮನೆ” ಮಕ್ಕಳ ಪಾಲನಾ ಕೇಂದ್ರಕ್ಕೆ ಬರುವ ಎಲ್ಲಾ ಮಕ್ಕಳಿಗೂ ಸಮವಸ್ತçವನ್ನು ತಾಲ್ಲೂಕು ಪಂಚಾಯತ್ ಅನುಧಾನದಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳಿರುವ ಪೋಷಕರು ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಲು ಇಚ್ಚಿಸಿದರೆ ತಮ್ಮ ಮಕ್ಕಳನ್ನು ಕೂಸಿನ ಮನೆ ಕೇಂದ್ರಕ್ಕೆ ಕಳುಹಿಸಿ ತಾವು ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಬರಬಹುದು ಹಾಗಾಗಿ ಪ್ರತಿಯೊಬ್ಬರು ಇದರ ಸದುಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ಸಲಹೆ ನೀಡಿದರು.
ಅದೇ ರೀತಿ ತಾಲ್ಲೂಕಿನಲ್ಲಿ ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಹಂಗಾಮಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ 101ಮಂದಿ ನೌಕರರಿಗೆ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆ ಮಾಡಲಾಗಿರುವ ಆದೇಶ ಪತ್ರವನ್ನು ಶಾಸಕರು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ವಿದ್ಯಾರ್ಹತೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದ ನೌಕರರು ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದರು ಇವರಿಗೆ ಸರ್ಕಾರವು ಅನುಮೋದನೆ ನೀಡುವ ಮೂಲಕ ಸೇವಾ ಭದ್ರತೆ ಒದಗಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ಟಿ.ಮಂಜು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಷ್ಮ, ತಾಲ್ಲೂಕು ಯೋಜನಾಧಿಕಾರಿ ಎಂ.ಶ್ರೀನಿವಾಸ್, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಕೆ.ವಿನೋದ್, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
