ಹಾಸನ: ಹಾಸನ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಹೆಚ್ ಬಿ ಕುಮಾರ್ ಹೊನ್ನೇನಹಳ್ಳಿ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಬಾ ನಂ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸೋಮನಾಯಕ್ ಅವರ ಅಧಿಕಾರಾವಧಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ಕುಮಾರ್ ಹೊನ್ನೇನಹಳ್ಳಿ ಅವರನ್ನು ಮುಂದಿನ ಆದೇಶದವರೆಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಂ.ಎ., ಬಿ.ಎಡ್ ಪದವೀಧರರಾಗಿರುವ ಅವರು ಹಾಸನ ತಾಲ್ಲೂಕಿನ ಜೋಡಿ ಬೀಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿಕೊಂಡು ಚುಟುಕು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಉದಯೋನ್ಮುಖ ಚುಟುಕು ಕವಿಗಳಿಗೆ ವೇದಿಕೆ ಕಲ್ಪಿಸಲು ಸೂಚಿಸಲಾಗಿದೆ.
ನೂತನ ಅಧ್ಯಕ್ಷರ ನೇಮಕದಿಂದ ತಾಲ್ಲೂಕಿನಲ್ಲಿ ಚುಟುಕು ಸಾಹಿತ್ಯ ಚಟುವಟಿಕೆಗಳು ಇನ್ನಷ್ಟು ಚೈತನ್ಯಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
