ಮೈಸೂರು, ಫೆಬ್ರವರಿ 23: ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಪ್ರಕರಣಕ್ಕೆ ಇದೀಗ ನಾಟಕೀಯ ತಿರುವು ಸಿಕ್ಕಿದ್ದು, ಪ್ರಕರಣದ ತನಿಖೆಯಲ್ಲಿ ಹೊಸ ಸಂಶಯಗಳು ಮೂಡಿವೆ. ಚಿನ್ನದ ಉದ್ಯಮಿ ವಿನೋದ್ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪ್ಲಾನ್ ರೂಪಿಸಿದ್ದಾರಾ ಎಂಬ ಅನುಮಾನಗಳು ಬಲವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಅಧಿಕಾರಿಗಳು ವಿನೋದ್ ಹಾಗೂ ನಟೇಶ್ ಒಟ್ಟಿಗೆ ಕಾಣಿಸಿಕೊಂಡಿರುವ ಹಲವು ಫೋಟೋಗಳನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಇದರಿಂದ ಸ್ನೇಹಮಯಿ ಕೃಷ್ಣರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತೇ ಎಂಬ ಪ್ರಶ್ನೆ ಉದ್ಭವವಾಗಿದೆ.
ವಿನೋದ್ ಆರಂಭದಲ್ಲಿ ಸ್ನೇಹಮಯಿ ಕೃಷ್ಣರ ವಿಶ್ವಾಸ ಗಳಿಸಿಕೊಂಡಿದ್ದು, ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದನ್ನು ಅವರಿಗೆ ನೀಡಿದ್ದರು ಎಂದು ಹೇಳಲಾಗಿದೆ. ಆ ಆಡಿಯೋದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿರುವ ಬಗ್ಗೆ ಮಾತುಕತೆ ಇದೆ ಎಂದು ವಿನೋದ್ ವಿವರಿಸಿದ್ದಾರಂತೆ. ಲಂಚವಾಗಿ ನೀಡಿದ ಕಾರು ಹಾಗೂ ಹಣದ ಚೀಲದ ಕುರಿತ ಕಥೆಯನ್ನು ಹೇಳಿ, ಕಾರಿನ ಫೋಟೋಗಳನ್ನೂ ವಿನೋದ್ ನೀಡಿದ್ದಾಗಿ ತಿಳಿದುಬಂದಿದೆ.
ವಿನೋದ್ ಹೇಳಿದ ಮಾಹಿತಿಯನ್ನು ನಂಬಿದ ಸ್ನೇಹಮಯಿ ಕೃಷ್ಣ, ಮುಖ್ಯ ಕಾರ್ಯದರ್ಶಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಬಳಿಕ ಮಾಧ್ಯಮಗಳ ಎದುರು ಸಹ ಇದೇ ಆರೋಪಗಳನ್ನು ಪುನರುಚ್ಚರಿಸಿ, ಸಂಬಂಧಿತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ನಡುವೆ ಪ್ರಕರಣದ ತನಿಖೆ ಮುಂದುವರಿದಿದ್ದು, ಆಡಿಯೋ ಮೂಲ, ಫೋಟೋಗಳ ನಿಜಾಸ್ತಿ ಹಾಗೂ ಆರೋಪಗಳ ಹಿನ್ನೆಲೆಯನ್ನು ಸಿಸಿಬಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
