ರಾಮನಾಥಪುರ- ಗ್ರಾಮೀಣ ಪ್ರದೇಶದಲ್ಲಿರುವ ದೇವಾಲಯದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರಿಸಿ, ಧರ್ಮ, ಜಾತಿ, ಸಮಾನತೆಗೆ ನಾವೆಲ್ಲ ಶ್ರಮಿಸಬೇಕು ಎಂದು ಅರಕಲಗೂಡು ತಾಲ್ಲೂಕು ತಹಸಿಲ್ದಾರ್ ಕೆ.ಸಿ. ಸೌಮ್ಯ ತಿಳಿಸಿದರು.

ರಾಮನಾಥಪುರದ ಶ್ರೀ ಉತ್ತರಾಧಿಮಠದಲ್ಲಿ ಇಂದು ಮಂಗಳವಾರ ನಡೆದ. ಶ್ರೀ ರಾಘವೇಂದ್ರಸ್ವಾಮಿಗಳವರ ವೈಭವೋತ್ಸವ ಹಾಗೂ ರಥೋತ್ಸವ ಮತ್ತು ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಗೌರವ ಸ್ವೀಕರಿಸಿ ಮಾತನಾಡಿ ಧಾರ್ಮಿಕ ಕೇಂದ್ರಗಳು, ಅಥವಾ ದೇಗುಲಗಳು ತೆರೆದಂತೆಲ್ಲಾ ಧಾರ್ಮಿಕತೆ ಬೆಳೆಯುತ್ತ ಸಾಗುತ್ತಿದೆ. ಇಂತಹ ದೇಗುಲಗಳಿಗೆ ತೆರಳುವಾಗ ಹಣ್ಣು, ಕಾಯಿ, ಕೊಂಡೊಯ್ದು ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಹಾಗೆಯೇ ಹಿಂದಿರುಗುವಾಗ ಅಲ್ಲಿ ಏನನ್ನಾದರೂ ಬಿಟ್ಟು ಬರುವುದು ನಮ್ಮ ಸಂಪ್ರದಾಯ. ಹಾಗಾಗಿ ದೇಗುಲದಲ್ಲಿ ಕೆಲಕಾಲ ಕುಳಿತು ಧ್ಯಾನಿಸಿ ಬಳಿಕ ಕೋಪ, ದೋಷ, ಅಹಂಕಾರ, ಹಾಗೂ ಕೆಟ್ಡ ಭಾವನೆಗಳನ್ನು ಅಲ್ಲಿಯೇ ಬಿಟ್ಟು ಬರುವುದನ್ನು ರೂಢಿಸಿಕೊಳ್ಳುವಣ. ದೇವಾಲಯ ಸ್ಥಾಪನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ ಎಂದು ತಿಳಿಸಿದರು.

ಶ್ರೀಮಠದ ವ್ಯವಸ್ಥಾಪಕರು ಶ್ರೀ.ವೇ. ಕನಕಾಚಾರ್ಯರ ನೇತೃತ್ವದಲ್ಲಿ ನಡೆದ ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಅರ್.ಎಸ್. ನರಸಿಂಹಮೂರ್ತಿ, ಸಮಾಜ ಸೇವಕರು ನರಸಿಂಹಮೂರ್ತಿ, ಶ್ರೀನಾಥ್, ಶ್ರೀನಿಧಿ, ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ಅಧ್ಯಕ್ಷರು ಎಂಎನ್. ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷರು ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ
