ಕೊರಟಗೆರೆ :-ಪಟ್ಟಣದ ಮಧ್ಯ ಬಸ್ಸ್ಟಾಂಡ್ನಲ್ಲಿ ‘ತಂಗುದಾಣ’ ಎಂದು ಸ್ಪಷ್ಟ ಫಲಕವಿದ್ದರೂ ಕೆಎಸ್ಆರ್ಟಿಸಿ ಬಸ್ಗಳು ನಿಯಮಿತವಾಗಿ ನಿಲ್ಲಿಸದೇ ಸಾಗುತ್ತಿರುವ ಆರೋಪದ ಹಿನ್ನೆಲೆ ಬುಧವಾರ ಬೆಳಿಗ್ಗೆ ಸಾರ್ವಜನಿಕರು ಬಸ್ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ಕೊರಟಗೆರೆ ಪಟ್ಟಣದ 2ನೇ ಬಸ್ ನಿಲ್ದಾಣದ ಸುಮಾರು ನೂರಾರು ವರ್ಷಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಎಂದೇ ಕರೆಸಿಕೊಳ್ಳುವಂತ ಸ್ಥಳದಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರಿಗೆ ನಿಲ್ದಾಣ ಬಂದ ಬಳಿ ಸರ್ಕಾರಿ ಬಸ್ ನಿಲ್ಲಿಸದ ಕಾರಣ ಬೇಸರಗೊಂಡ ಪ್ರಯಾಣಿಕರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡು ಪಟ್ಟಣದ ಕೇಂದ್ರ ಭಾಗದಲ್ಲಿ ವಾಹನಗಳ ದಟ್ಟಣೆ ಉಂಟಾಯಿತು.
*ಸಮಸ್ಯೆಯ ಮೂಲ:
ಪಟ್ಟಣದ ಪ್ರಮುಖ ಮಧ್ಯ ನಿಲ್ದಾಣದಲ್ಲಿ ಬಸ್ಗಳು ನಿಲ್ಲಿಸದೇ ಹೋಗುತ್ತಿರುವುದು ಹೊಸ ವಿಚಾರವಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಹಲವು ದಿನಗಳಿಂದ ಈ ಸಮಸ್ಯೆ ಮುಂದುವರಿದರೂ ಸಂಬಂಧಿತ ಅಧಿಕಾರಿಗಳಿಂದ ಸಮರ್ಪಕ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನರು ರಸ್ತೆ ಹಿಡಿದು ಪ್ರತಿಭಟನೆ ನಡೆಸಿದರು.
ತಂಗುದಾಣ ಇದ್ದೂ ಬಸ್ ನಿಲ್ಲಿಸದೇ ಹೋಗುವುದು ಏಕೆ? ಇದು ಚಾಲಕ ನಿರ್ವಾಹಕರ ನಿರ್ಲಕ್ಷ್ಯವಲ್ಲದೆ ಇನ್ನೇನು?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟರಾಜು ಮಾತನಾಡಿ, ಪಟ್ಟಣದ ಪ್ರತಿ ಮುಖ್ಯ ಸ್ಟಾಪ್ನಲ್ಲಿ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ಮಧ್ಯ ಬಸ್ಸ್ಟಾಂಡ್ ಅನ್ನು ಬಿಟ್ಟು ಹೋಗುವುದು ಸರಿಯಲ್ಲ. ಇದು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧ ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಕೋಮಲ ತನ್ನ ಅಸಮಾಧಾನ ವ್ಯಕ್ತಪಡಿಸಿ, ಪರೀಕ್ಷೆ ಮತ್ತು ಕಾಲೇಜಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬಸ್ ನಿಲ್ಲಿಸದೇ ಹೋದರೆ ಅರ್ಧ ಗಂಟೆಗೂ ಹೆಚ್ಚು ಕಾಯಬೇಕಾಗುತ್ತದೆ ಎಂದರು. ಹಿರಿಯ ನಾಗರಿಕರು ಹಾಗೂ ಮಹಿಳೆಯರೂ ಇದೇ ರೀತಿಯ ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದರು.
ಸಂಚಾರದ ಮೇಲೆ ಪರಿಣಾಮ:
ಬಸ್ ತಡೆದ ಪರಿಣಾಮ ಮಧ್ಯ ಬಸ್ಸ್ಟಾಂಡ್ ಪ್ರದೇಶದಲ್ಲಿ ವಾಹನಗಳ ಸಾಲು ಉಂಟಾಗಿ ವ್ಯಾಪಾರಸ್ಥರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಿದರು. ಪಟ್ಟಣದ ಪ್ರಮುಖ ರಸ್ತೆಯಲ್ಲೇ ಈ ಘಟನೆ ನಡೆದಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಪೊಲೀಸ್ ಮಧ್ಯಸ್ಥಿಕೆ
ಸ್ಥಳಕ್ಕೆ ಆಗಮಿಸಿದ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಅವರು ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ, ಶಾಂತಿಯುತವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಬಳಿಕ ಟ್ರಾಫಿಕ್ ಕ್ಲಿಯರ್ ಮಾಡಿ ಬಸ್ ಮುಂದುವರಿಯಲು ಅವಕಾಶ ಮಾಡಿಕೊಡಲಾಯಿತು.
ಅಧಿಕಾರಿಗಳ ಭರವಸೆ
ಕೆಎಸ್ಆರ್ಟಿಸಿ ಸ್ಥಳೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಚಾಲಕ ಹಾಗೂ ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡಿ ಮಾನ್ಯ ನಿಲ್ದಾಣಗಳಲ್ಲಿ ಬಸ್ ಕಡ್ಡಾಯವಾಗಿ ನಿಲ್ಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಈ ಭರವಸೆ ಕೇವಲ ಮಾತಿನ ಮಟ್ಟದಲ್ಲೇ ಉಳಿಯದಂತೆ ಕಾರ್ಯರೂಪಕ್ಕೆ ಬರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸಮಸ್ಯೆ ಮುಂದುವರಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಸಾರಿಗೆ ಶಿಸ್ತಿನ ಜಾರಿ ಹಾಗೂ ಸಾರ್ವಜನಿಕರ ಸೌಲಭ್ಯಗಳ ವಿಚಾರದಲ್ಲಿ ಆಡಳಿತದ ಜಾಗೃತಿ ಅಗತ್ಯವಿದೆ ಎಂಬುದನ್ನು ಈ ಘಟನೆಯಿಂದ ಸ್ಪಷ್ಟವಾಗಿದೆ.
ಪ್ರತಿಭಟನೆಯಲ್ಲಿ ಜಯರಾಮ್, ರಂಗರಾಜು, ಮಂಜುನಾಥ್, ವಿಜಯಕುಮಾರ್ ಸೇರಿದಂತೆ ಇತರರು ಇದ್ದರು.
