ಕೊರಟಗೆರೆ:- ಮೂಕ ಪ್ರಾಣಿಯ ಜೀವ ಉಳಿಸಲು ಹೋದ ಆಟೋ ಚಾಲಕನೊಬ್ಬ ಅಪಘಾತದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1:20ರ ಸಮಯದಲ್ಲಿ ಕೊರಟಗೆರೆ ಪ್ರವಾಸಿ ಮಂದಿರದ ಮುಂದಿನ ಮುಖ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಆಟೋ ಚಾಲನೆ ಮಾಡುತ್ತಿದ್ದಾಗ ದಿಢೀರನೆ ರಸ್ತೆಗೆ ಕೋತಿಯೊಂದು ಅಡ್ಡ ಬಂದಿದೆ, ಮೂಕ ಪ್ರಾಣಿಯ ಜೀವ ಉಳಿಸುವ ಆತುರದಲ್ಲಿ ಚಾಲಕ ಮಹೇಂದ್ರ (35) ಆಟೋವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ ಎದುರಿಗೆ ಬರುತ್ತಿದ್ದ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಆಟೋ ಚಾಲಕ ಮಹೇಂದ್ರ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಸೋಂಪುರ ಬಳಿಯ ಜೈಪುರ ಗ್ರಾಮದವರು ಎಂದು ಗುರುತಿಸಲಾಗಿದೆ.
ಅಪಘಾತದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುವವರ ಎದೆ ನಡುಗಿಸುವಂತಿದೆ. ಕೋತಿಯನ್ನು ತಪ್ಪಿಸಲು ಹೋಗಿ ಚಾಲಕ ತನ್ನ ಪ್ರಾಣ ತೆತ್ತಿರುವುದು ಸಾರ್ವಜನಿಕರಲ್ಲಿ ಶೋಕ ಮೂಡಿಸಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಹಾಗೂ ಪಿಎಸ್ಐ ತೀರ್ಥೇಶ್ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ನಡೆಸುತ್ತಾರೆ ಎನ್ನಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.
