ತುಮಕೂರು: ಆರ್ಥಿಕ ಸಬಲೀಕರಣದ ಮೂಲಕ ವಿಕಲಚೇತನರು ಸ್ವಾವಲಂಬಿಗಳಾಗಿ ಬಾಳಲು ಅವಕಾಶ ಕಲ್ಪಿಸಬೇಕು. ವಿಕಲಚೇತನರಿಗೆ ಜಾತಿಬೇಧವಿಲ್ಲ, ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದಾರೆ. ಇವೆಲ್ಲರು ಆರ್ಥಿಕ ಚಟುವಟಿಕೆ ನಡೆಸಲು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಈ ಬಗ್ಗೆ ಶಾಸಕರುಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರುವಂತೆ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಲಹೆ ಮಾಡಿದರು.
ತಿಪಟೂರು ಕಾರ್ಯಕ್ರಮ ಮುಗಿಸಿ ಭಾನುವಾರ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಗಂಗರಾಜು ಅವರ ತುಮಕೂರಿನ ರಿಂಗ್ ರಸ್ತೆಯಲ್ಲಿರುವ ನಿವಾಸದಲ್ಲಿ ಸೇರಿದ್ದ ವಿಕಲಚೇತನರ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವಿಕಲಚೇತನರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಿ ಅವರು ಸ್ವಾಭಿಮಾನದಿಂದ ಬಾಳುವಂತಹ ಅವಕಾಶ ಕಲ್ಪಿಸಬೇಕು ಎಂಬುದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಳಕಳಿ. ತಮ್ಮ ಅಧಿಕಾರವಧಿಯಲ್ಲಿ ಸುಮಾರು ಆರು ಲಕ್ಷ ವಿಕಲಚೇತನರಿಗೆ ವಿವಿಧ ರೀತಿಯ ಉದ್ಯೋಗ ಕಲ್ಪಿಸಲು ಕಾರಣರಾದರು. ಇವತ್ತಿಗೂ ವಿಕಲಚೇತನರ ಸಮಸ್ಯೆಗಳಿಗೆ ಕಾಳಜಿಯಿಂದ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ವಿಕಲಚೇತನರು ಯಾರಿಗೂ ಹೊರೆಯಾಗಬಾರದು, ತಾವೇ ದುಡಿದು ಸ್ವಾಭಿಮಾನದಿಂದ ಬಾಳಬೇಕು. ಅವರ ಸ್ವಾಲವಂಬಿ ಬದುಕಿಗೆ ನೆರವಾಗಲು ಸರ್ಕಾರ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅನುದಾನ ನೀಡಿ ವಿಕಲಚೇತನರು ಆರ್ಥಿಕ ಚಟುವಟಿಕೆ ನಡೆಸಲು ಸರ್ಕಾರ ಆಸಕ್ತಿ ತೋರಬೇಕು. ಈ ಬಗ್ಗೆ ಶಾಸಕರುಗಳ ಮೂಲಕ ಸರ್ಕಾರಕ್ಕೆ ಒತ್ತಾಯ ತರುವಂತೆ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸಂವಿಧಾನದಲ್ಲಿ ಎಲ್ಲರಿಗೂ ರಾಜಕೀಯ ಪ್ರಾತಿನಿಧ್ಯದ ಅವಕಾಶವಿದೆ.ವಿಕಲಚೇತನರಿಗೆ ರಾಜಕೀಯ ಸ್ಥಾನಮಾನದ ಮೀಸಲಾತಿಯ ಜಾರಿ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತಾವು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಗಮನಕ್ಕೆ ತರುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಈಗ 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಆದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ನೇಮಕಾತಿಯಲ್ಲಿ ಪರಿಗಣಿಸುತ್ತಿಲ್ಲ, ಇದರಿಂದ ಪರಿಶಿಷ್ಟ ಜಾತಿಯ ಬಹುಸಂಖ್ಯಾತ ಮಾದಿಗ ಸಮುದಾಯದ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತದೆ. ಅನ್ಯಾಯ ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಗಂಗರಾಜು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ನಿಂಗಪ್ಪ, ಕೆ.ಎಂ.ತಿಮ್ಮರಾಯಪ್ಪ, ವೈ.ಹೆಚ್.ಹುಚ್ಚಯ್ಯ, ಡಾ.ಮುಕುಂದ್, ಶಿವನಂಜಯ್ಯ, ವೈ.ಕೆ.ಬಾಲಕೃಷ್ಣಪ್ಪ, ಹೊಳಕಲ್ಲು ಆಂಜನಪ್ಪ, ರಾಮಣ್ಣ, ಧರಣೇಂದ್ರಕುಮಾರ್, ಹೆಚ್ಡಿಕೆಮಂಜುನಾಥ್, ಗೂಳೂರು ನವೀನ್ ಸೇರಿದಂತೆ ಹಲವು ವಿಕಲಚೇತನರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
