ಬೆಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಹಿನ್ನೆಲೆ ದುಬೈ, ಅಬುಧಾಬಿ, ಜೆದ್ದಾ ಹಾಗೂ ದೋಹಾ ಸೇರಿ ಹಲವೆಡೆ ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದು, ಸಾವಿರಾರು ಪ್ರಯಾಣಿಕರು ಅಲ್ಲಿನ ಏರ್ಪೋರ್ಟ್ಗಳಲ್ಲಿ ಸಿಲುಕಿಕೊಂಡಿದ್ದಾರೆ.
ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕಳೆದ ಸೋಮವಾರ ರಾತ್ರಿಯಿಂದ ಎಮಿರೇಟ್ಸ್, ಎತಿಹಾದ್ ಮತ್ತು ಇಂಡಿಗೋ ವಿಮಾನಗಳ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ದುಬೈ ಹಾಗೂ ಅಬುಧಾಬಿಯಿಂದ ಬೆಂಗಳೂರಿಗೆ ಹಾರುತ್ತಿದ್ದು, ತವರಿಗೆ ಮರಳಲು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ.

ಸೋಮವಾರ ರಾತ್ರಿ 9.40ಕ್ಕೆ ಬಂದ ಮೊದಲ ವಿಮಾನದಲ್ಲಿ 213 ಮಂದಿ ವಾಪಸ್ ಆಗಿದ್ದಾರೆ. ಮಂಗಳವಾರ ಮುಂಜಾನೆ 3 ಗಂಟೆಗೆ ಬಂದ ಎರಡನೇ ವಿಮಾನದಲ್ಲಿ 490 ಮಂದಿ, ಅದೇ ದಿನ ಸಂಜೆ 7 ಗಂಟೆಗೆ ಬಂದ ಮೂರನೇ ವಿಮಾನದಲ್ಲಿ 350 ಮಂದಿ, ಬುಧವಾರ ಮಧ್ಯರಾತ್ರಿ 1 ಗಂಟೆಗೆ ಬಂದ ನಾಲ್ಕನೇ ವಿಮಾನದಲ್ಲಿ 200 ಮಂದಿ ಹಾಗೂ ಬುಧವಾರ ಸಂಜೆ ಬಂದ ಐದನೇ ವಿಮಾನದಲ್ಲಿ 246 ಮಂದಿ ಸೇರಿ ಇದುವರೆಗೆ ಸುಮಾರು 1500 ಪ್ರಯಾಣಿಕರು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ.
ಇನ್ನೂ ಸಾಕಷ್ಟು ಕನ್ನಡಿಗರು ದುಬೈ ಹಾಗೂ ಇತರೆ ನಗರಗಳ ಏರ್ಪೋರ್ಟ್ಗಳಲ್ಲಿ ಸಿಲುಕಿದ್ದು, ಸೀಮಿತ ಸಂಖ್ಯೆಯ ವಿಮಾನಗಳು ಮಾತ್ರ ಸಂಚರಿಸುತ್ತಿರುವುದರಿಂದ ಹಂತ ಹಂತವಾಗಿ ಅವರನ್ನು ವಾಪಸ್ ಕರೆತರಲಾಗುತ್ತಿದೆ.

ಈ ನಡುವೆ ಅಮೆರಿಕಕ್ಕೆ ತೆರಳಬೇಕಿದ್ದ ಮಹಿಳೆಯೊಬ್ಬರು ವಿಮಾನ ರದ್ದಾದ ಕಾರಣ ದುಬೈನಲ್ಲಿ ಸಿಲುಕಿಕೊಂಡು ನಂತರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಹಾಗೆಯೇ ಅಮೆರಿಕದಿಂದ ದುಬೈಗೆ ಪ್ರವಾಸಕ್ಕೆ ಬಂದ ಕೆಲವರು ಕೂಡ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳಿದ್ದಾರೆ.
