ಕೊರಟಗೆರೆ, ಮಾರ್ಚ್ 9: ತಾಲ್ಲೂಕಿನ ತೋವಿನಕೆರೆಯ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಪೋಷಕ-ಶಿಕ್ಷಕರ ಮಹಾಸಭೆ ನಡೆಯಿತು. ಸಭೆಗೆ ಮಾನ್ಯ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ. ಕೆ. ನಾಗಣ್ಣ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಪೋಷಕರ ಸಭೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರ ಆಶಯದಂತೆ ತೋವಿನಕೆರೆಯಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಮುಂದಿನ ಶೈಕ್ಷಣಿಕ ವರ್ಷದ ಜೂನ್ ತಿಂಗಳ ಆರಂಭದಲ್ಲೇ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಎಲ್ಲಾ ವಿಷಯವಾರು ಶಿಕ್ಷಕರನ್ನು ಒದಗಿಸಲಾಗುವುದು ಎಂದು ಹೇಳಿದರು. ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋವಿನಕೆರೆ ಸರ್ಕಾರಿ ಪ್ರೌಢಶಾಲೆಗೆ ದಾಖಲಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ವರ್ಷದಿಂದ ಹತ್ತನೇ ತರಗತಿ ಆರಂಭವಾಗಲಿರುವುದರಿಂದ, ಈ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರವನ್ನು ಆರಂಭಿಸುವ ಯೋಜನೆಯೂ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಡಿ. ಪ್ರಸನ್ನಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಟಿ.ಎ., ಶಿಕ್ಷಣ ಸಂಯೋಜಕ ಗಿರೀಶ್ ಬಿ.ಎಸ್., ಮುಖ್ಯ ಶಿಕ್ಷಕ ನರಸಿಂಹಯ್ಯ, ಸಿ.ಆರ್.ಪಿ ಹರೀಶ್ ಕುಮಾರ್, ವಿಭೂತಿ ಸಿದ್ದಪ್ಪ, ಎಸ್ಡಿಎಂಸಿ ಸದಸ್ಯರಾದ ಶ್ರೀನಿವಾಸ್, ಶ್ವೇತಾ ಹನುಮಂತರಾಜು ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಸಹ ಶಿಕ್ಷಕ ಸಿದ್ದಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
