ಕೆ.ಆರ್.ಪೇಟೆ,ಮಾ.09: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಶ್ರಯದಲ್ಲಿ ಮಂಡ್ಯ ಜಿಲ್ಲಾ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ 6ನೇ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಕೆ.ಆರ್.ಪೇಟೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಷ್ಟೀಯ ಕಾರ್ಯದರ್ಶಿ ದೆಹಲಿಯ ಬಿ.ವೆಂಕಟ್ ಅವರು ಸಮ್ಮೇಳನವನ್ನು ಕೃಷಿ ಉಪಕರಣಕ್ಕೆ ಪೂಜೆ ಸಲ್ಲಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ, ಮಾತನಾಡಿ ಕೇರಳ ಸರ್ಕಾರದ ಮಾದರಿಯಲ್ಲಿ ಕಾರ್ಮಿಕರಿಗೆ ಪ್ರತಿನಿತ್ಯ ಕನಿಷ್ಠ 1000ರೂ ನೀಡಬೇಕು. ಕೇರಳ ಸರ್ಕಾರವು ಕಾರ್ಮಿಕರಿಗೆ ಶೇ.90ರಷ್ಟು ಮಂದಿದೆ ಉಚಿತವಾಗಿ ಭೂಮಿ ಹಂಚಿಕೆ ಮಾಡಿದೆ ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯವೂ ಸಹ ಗ್ರಾಮೀಣ ಕಾರ್ಮಿಕರಿಗೆ ಉಚಿತವಾಗಿ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಯಥಾವತ್ ಉಳಿಸಬೇಕು.
ವಿಬಿರಾಮ್.ಜಿ.ಎಂಬ ಹೊಸ ಯೋಜನೆಯನ್ನು ಕೈಬಿಡಬೇಕು. ಎಲ್ಲಾ ಬಡವರಿಗೂ ಮನೆ ಮತ್ತು ನಿವೇಶನ ವಿತರಿಸಬೇಕು ಹಾಗೂ ಬಗರ್ಹುಕುಂ ಸಾಗುವಳಿದಾರರಿಗೆ ಸಗುವಳಿ ಹಕ್ಕುಪತ್ರವನ್ನು ವಿತರಣೆ ಮಾಡಬೇಕು. ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಜಿ.ಎಸ್.ಟಿ ತೆರಿಗೆಯನ್ನು ನಿಲ್ಲಿಸಬೇಕು ಮೈಕ್ರೋ ಫೈನಾನ್ಸ್ ಕಿರುಕುಳವನ್ನು ತಪ್ಪಿಸಬೇಕು ರೈತರು ಮತ್ತು ಕೃಷಿ ಕಾರ್ಮಿಕರನ್ನು ನಾಶಗೊಳಿಸುವಂತಹ 2025ರ ವಿದ್ಯುತ್ ಕಾಯ್ದೆಯನ್ನು ವಾಪಸ್ ಪಡೆಯಬೇಕು ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಕಾರ್ಮಿಕರಿಗೆ ಪಿಂಚಣಿಯನ್ನು ನೀಡಬೇಕು ಪ್ರತಿ ಹಳ್ಳಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕು ಸರ್ಕಾರಿ ಶಾಲೆಯನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲೂ ಒಂದೊAದು ಗ್ರಂಥಾಲಯವನ್ನು ತೆರೆಯಬೇಕು. ಪ್ರತಿ ಊರಿನಲ್ಲಿಯೂ ಸುಸಜ್ಜಿತವಾದ ಸ್ಮಶಾನವನ್ನು ನಿರ್ಮಾಣ ಮಾಡಬೇಕು.

ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಸ್ಥಳೀಯ ಕಚ್ಚಾ ಸಾಮಗ್ರಿ ಬಳಕೆ ಮಾಡುವಂತಹ ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸಬೇಕು. ಈ ಮೂಲಕ ಗ್ರಾಮೀಣ ಕಾರ್ಮಿಕರು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು. ಎಲ್ಲಾ ಬಡವರಿಗೂ ಉಚಿತ ಆರೋಗ್ಯ, ಉಚಿತ ಶಿಕ್ಷಣ ನೀಡಬೇಕು. ಎಲ್ಲಾ ಕಾರ್ಮಿಕರಿಗೂ ಯಾವುದೇ ಭದ್ರತೆ ಪಡೆಯದೇ ಬ್ಯಾಂಕ್ ಸಾಲವನ್ನು ನೀಡಬೇಕು. ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿ ಅಸ್ಪೃಶ್ಯತಾ ಆಚರಣೆಯನ್ನು ನಿಲ್ಲಿಸಬೇಕು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಬೇಕು. ಹೀಗೇ ಕಾರ್ಮಿಕರ ಅಭಿವೃದ್ಧಿಗೆ ಪೂರಕವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಈ ಸಮ್ಮೇಳನದಲ್ಲಿ ಹಕ್ಕೊತ್ತಾಯ ಮಂಡಿಸಲಾಗಿದೆ ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂಧಿಸಬೇಕು ಇಲ್ಲದಿದ್ದರೆ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಬಿ.ವೆಂಕಟ್ ಒತ್ತಾಯ ಮಾಡಿದರು.ಜಿಲ್ಲಾ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಶಿವಮಲ್ಲಯ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಿರಿಯ ರೈತ ಮುಖಂಡ ಎಂ.ವಿ ರಾಜೇಗೌಡ, ಜಿಲ್ಲಾ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಸಂಘಟನಾ ಕಾರ್ಯದರ್ಶಿ ಬಿ.ಹನುಮೇಶ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ವಿಕಲ ಚೇತನಪಾಲಕರ ಸಂಘದ ಅಧ್ಯಕ್ಷ ದೊಡ್ಡಮರೀಗೌಡ, ತಾಲ್ಲೂಕು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಹೆಚ್.ಗಿರೀಶ್, ಜಿಲ್ಲಾ ಕಾರ್ಯದರ್ಶಿ ಎನ್.ಸುರೇಂದ್ರ, ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಲಕ್ಷ್ಮಮ್ಮ,, ಕೆ.ಬಸವರಾಜು, ಆರ್.ರಾಜು, ಸರೋಜಮ್ಮ, ಟಿ.ವಸಂತ, ಅನಿತ, ಶುಭಾವತಿ, ರಾಮಯ್ಯ, ಪಾಪಣ್ಣ, ಕಪನಿಗೌಡ, ಟಿ.ಹೆಚ್.ಆನಂದ್, ಲಕ್ಷ್ಮೀ ಕುಂತೂರು, ಟಿ.ಪಿ.ಅರುಣ್ಕುಮಾರ್, ಅಮಾಸಯ್ಯ, ಎಂ.ಎಸ್.ಸಂತೋಷ್, ಗೋಪಾಲ್, ಶಂಕರಪ್ಪ, ಚಂದ್ರಶೇಖರ್ ಆರ್ಯ, ಶಾಂತಮ್ಮ ಸೇರಿದಂತೆ ನೂರಾರು ಗಣ್ಯರು ಸಾವಿರಾರು ಕಾರ್ಮಿಕರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರಮುಖ ಬೀದಿಗಳಲ್ಲಿ ಕಾರ್ಮಿಕರು ಬೃಹತ್ ಜನ ಜಾಗೃತಿ ಜಾಥಾ ನಡೆಸಿದರು.
– ಶ್ರೀನಿವಾಸ್ ಆರ್.
